ದೇವಿ ಸುವರ್ಚಲ ಮಂದಿರ. ಯಾರು ಈ ಹೊಸ ದೇವತೆ , ಎಲ್ಲಿದೆ ಈ ಮಂದಿರ ಎಂದು ಅನಿಸಿರಬಹುದಲ್ಲವೆ. ಹೌದು ಈ ದೇವಿ ಯಾರೆಂದು ತಿಳಿದರೆ ನಿಮ್ಮ ಕಿವಿಗಳನ್ನು, ಕಣ್ಣನ್ನು ನೀವೇ ನಂಬುವುದಿಲ್ಲ. ಈಕೆ ಮತ್ತಾರೂ ಅಲ್ಲ, ವಾಯುಪುತ್ರ, ಅಂಜನೀ ಸುತ, ಶ್ರೀ ರಾಮನ ಬಂಟ ಹನುಮಂತನ ಪತ್ನಿ.

ಏನು ಕೇಳಿ ದಂಗಾದಿರೇ? ಆಜನ್ಮ ಬ್ರಹ್ಮಚಾರಿಯಾದ ಹನುಮನಿಗೆ ಪತ್ನಿಯೇ ಎಂಬ ಅನುಮಾನ ಮೂಡಿರಬಹುದು.ಆದರೆ ಇದು ನಿಜ ತೆಲಂಗಾಣದದ ಖಮ್ಮಮ್ ಜಿಲ್ಲೆಯಲ್ಲಿ ಪಂದಿಲ್ಲಪಲ್ಲಿ ಎಂಬ ಊರಿನಲ್ಲಿ ಭಗವಾನ್ ಹನುಮಂತ, ಪತ್ನಿಯಾದ ಸುವರ್ಚಲಾ ದೇವಿಯ ಸಮೇತ ಆರಾಧಿಸಲ್ಪಡುತ್ತಿದ್ದು, ಅಲ್ಲೊಂದು ದೇವಾಲಯವು ಕೂಡಾ ಇರುವುದು ವಿಶೇಷತೆಗಳಲ್ಲಿ ವಿಶೇಷವಾಗಿದೆ.

ಬಾಲ ಬ್ರಹ್ಮಚಾರಿಯಾದ ಹನಮನಿಗೆ ಹಾಗಾದರೆ ವಿವಾಹವಾಗಿತ್ತೇ? ಎಂಬ ಪ್ರಶ್ನೆಗೆ ಇಲ್ಲಿದೆ ಪುರಾಣ ಆಧಾರಿತ ಉತ್ತರ.ಹನುಮಂತನಿಗೆ ಸರ್ವ ವಿದ್ಯೆಗಳನ್ನು ಕಲಿಸಿದ ಗುರು ಸೂರ್ಯ ಭಗವಾನ್. ಹನುಮನು ತನ್ನ ಗುರುವಿನ‌‌ ಬಳಿ ಅನೇಕ ವಿದ್ಯೆಗಳನ್ನು ಕಲಿಯುವ ಸಂದರ್ಭದಲ್ಲಿ ಸೂರ್ಯದೇವನಿಗೆ ತಿಳಿದಿದ್ದ ಒಂಭತ್ತು ದಿವ್ಯ ವಿದ್ಯೆಗಳನ್ನು ಅಭ್ಯಸಿಸುತ್ತಿದ್ದನು.

ಆಗ ಐದು ದಿವ್ಯ ವಿದ್ಯೆಗಳನ್ನು , ಸೂಕ್ಷ್ಮ ಮತಿಯಿಂದ ಬಹಳ ನಿಷ್ಠಾವಂತನಾಗಿ ಕಲಿತ. ಆದರೆ ಉಳಿದ ನಾಲ್ಕು ವಿದ್ಯೆಗಳನ್ನು ಕಲಿಯುವ ಸಂದರ್ಭದಲ್ಲಿ ಎದುರಾಯಿತು ಅಡ್ಡಿ, ಆತಂಕಗಳು.ಐದು ದಿವ್ಯ ವಿದ್ಯೆಗಳನ್ನು ಸುಲಲಿತವಾಗಿ ಕಲಿಸಿದ ಗುರು ಸೂರ್ಯ ಭಗವಾನನಿಗೆ , ಉಳಿದ ನಾಲ್ಕು ದಿವ್ಯ ವಿದ್ಯೆ ಕಲಿಸುವುದು ಕಠಿಣವಾಯಿತು.

ಏಕೆಂದರೆ ಆ ವಿದ್ಯೆಗಳನ್ನು ಅವಿವಾಹಿತರಿಗೆ ಕಲಿಸಬಾರದೆಂಬ ಅಥವಾ ವಿವಾಹಿತರಿಗೆ ಮಾತ್ರ ಆ ವಿದ್ಯೆ ಎಂಬ ಷರತ್ತು ವಿಧಿಸಲಾಗಿತ್ತು. ಹನುಮಂತನ ಜನ್ಮ ದುಷ್ಟ ಸಂಹಾರಕ್ಕಾಗಿ ಆಗಿದ್ದು, ಸರ್ವ ವಿದ್ಯೆಗಳನ್ನು‌ ಆತ ಕಲಿಯಲೇಬೇಕಾದ ಅನಿವಾರ್ಯವಿತ್ತು.

ಆಗ ಸೂರ್ಯ ಭಗವಾನ್ ತನ್ನ ಕಾಂತಿಯ ಶಕ್ತಿಯಿಂದ ಒಬ್ಬ ಸುಂದರವಾದ ಕನ್ಯೆಯನ್ನು ಸೃಷ್ಟಿಸಿದ. ಆತನ ಕಿರಣಗಳ ಕಾಂತಿಯಿಂದ ಜನ್ಮ ಪಡೆದ ಈ ಕನ್ಯೆ ಸುವರ್ಚಲ ಎಂಬ ಹೆಸರು ಪಡೆದಳು.

ನಂತರ ದಿವ್ಯ ವಿದ್ಯೆಗಳ ಕಲಿಕೆಯ ಅನಿವಾರ್ಯತೆಯ‌ ಅರಿವನ್ನು ಹನುಮಂತನಿಗೆ ತಿಳಿಸಿ, ಆಕೆಯನ್ನು ವಿವಾಹವಾಗುವಂತೆ ಅರುಹಿದ. ಆದರೆ ಹನುಮಂತ ವಿವಾಹವಾದರೆ ತನ್ನ ಬ್ರಹ್ಮಚರ್ಯ ವ್ರತಕ್ಕೆ ಭಂಗವಾಗದೆ ಎಂದಾಗ, ಸೂರ್ಯದೇವನು ಅಯೋನಿಜೆಯಾದ ಆಕೆಯನ್ನು ವಿವಾಹವಾದರೂ,

ಹನುಮನ ಬ್ರಹ್ಮಚರ್ಯ ಭಂಗವಾಗದೆಂಬ ಮಾತನ್ನು ನೀಡಿದ.ಹೀಗೆ ವಿದ್ಯಾರ್ಜನೆಗಾಗಿ ಹನುಮನು , ಸುವರ್ಚಲ ದೇವಿಯನ್ನು ಮದುವೆಯಾದನೆಂದು ಹೇಳಲಾಗಿದೆ. ರಾಮಾಯಣದ ಒಂದು ಸಂದರ್ಭದಲ್ಲಿ, ಸೀತೆಯು ಮಹಾ ಪತಿವ್ರತೆಯರ ಹೆಸರು ಹೇಳುವಾಗ

ಸುವರ್ಚಲಾ ದೇವಿಯ ಹೆಸರನ್ನು ಉಲ್ಲೇಖಿಸಿರುವುದುಂಟು. ವಿವಾಹ ನಂತರ ಸುವರ್ಚಲಾ ದೇವಿ, ತಪಸ್ಸಿನಲ್ಲಿ ತನ್ನ ಜೀವನ ಮುಗಿಸುತ್ತಾಳೆ. ಹೀಗೆ ಹನುಮಂತ ವಿವಾಹದ ನಂತರವೂ ಬ್ರಹ್ಮಚಾರಿಯಾಗಿಯೇ ಉಳಿದ.ಪುರಾಣದಲ್ಲಿ ಹೀಗೆ ಉಲ್ಲೇಖವಿದ್ದು, ಅದರ ಅನುಗುಣವಾಗಿ ಭಾರತದ ಕೆಲವು ಕಡೆ ಮಾತ್ರ ಹನುಮಂತನನ್ನು ಪತ್ನಿ ಸಮೇತ ಪೂಜಿಸುವ ಪರಿಪಾಠವಿದ್ದು, ಅದಕ್ಕೆ ಒಂದು ಉತ್ತಮ ಉದಾಹರಣೆ ಪಂದಿಲ್ಲಪಲ್ಲಿಯಲ್ಲಿರುವ ದೇವಿ ಸುವರ್ಚಲ ಮಂದಿರ.

ಇ.ಸೋಮಶೇಖರ್.
ಉಪನ್ಯಾಸಕ, ವಿಷನ್ ಅಕಾಡೆಮಿ
ಪ್ರಗತಿ ಪಿಯು ಕಾಲೇಜು
ಚಿಂತಾಮಣಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here