ಕರ್ನಾಟಕ 1956 ರಿಂದಲೇ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತ್ತು. 1967 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿದರು. ಹಿಂದಿ ಪ್ರಾಬಲ್ಯವಿರದಿದ್ದ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ವ್ಯಕ್ತವಾದ್ದರಿಂದ ಹಿಂದಿಯೊಡನೆ ಇಂಗ್ಲಿಷ್ ಭಾಷೆಯನ್ನೂ ಸೇರಿಸಲಾಯಿತು. ಇದು ಮುಂದುವರೆದು ಶಾಲಾ ಶಿಕ್ಷಣದಲ್ಲಿಯೂ ಇಂಗ್ಲಿಷ್ ಹಾಗು ಹಿಂದಿ ಕಡ್ಡಾಯವೆನ್ನುವಂತಾಯಿತು. ಆದರೆ ಕರ್ನಾಟಕದಲ್ಲಿ ಅಧೀಕೃತ ಭಾಷೆಯೇ ಇರದಿರುವುದು ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಾಯಿತು.

ಕನ್ನಡವನ್ನು ಕರ್ನಾಟಕದಲ್ಲಿ ಅಧೀಕೃತ ಭಾಷೆಯಾಗಿಯೂ ಹಾಗು ಆಡಳಿತ ಭಾಷೆಯಾಗಿಯೂ ಘೋಷಿಸದ ಹೊರತು ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ ಕಷ್ಟ ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಆದ ಕಾರಣದಿಂದಲೇ ಕರ್ನಾಟಕದಲ್ಲಿ ಎಷ್ಟೋ ಶಾಲೆಗಳು ಕನ್ನಡ ಭಾಷೆಯೇ ಇಲ್ಲದಂತೆ ಸಂಸ್ಕೃತ ಮತ್ತಿತರ ಭಾಷೆಗಳನ್ನು ಕಲಿಸುತ್ತಿದ್ದವು. ಸಾಲದೆಂಬಂತೆ ಆ ಸಮಯದಲ್ಲಿ ಶಾಲಾ ಶಿಕ್ಷಣದಲ್ಲಿ ಸಂಸ್ಕೃತ ಎಲ್ಲ ಭಾಷೆಗಳಿಗಿಂತ ಹೆಚ್ಚಿನ ಬೇಡಿಕೆಯಲ್ಲಿದ್ದ ಭಾಷೆಯಾಗಿತ್ತು. ಎಷ್ಟೋ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸದೆ ಶಾಲಾ ಶಿಕ್ಷಣವನ್ನು ಮುಗಿಸುತ್ತಿದ್ದರು. ಇವುಗಳಿಗೆಲ್ಲ ಇತಿಶ್ರೀ ಹಾಡಲು ಕನ್ನಡದ ಕವಿ ವಿ.ಕೃ ಗೋಕಾಕ್ ವಿಸ್ಮೃತ ವರದಿಯೊಂದನ್ನು ಸಿದ್ಧಪಡಿಸಿದರು. ಈ ವರದಿಯ ಅನುಷ್ಠಾನಕ್ಕಾಗಿ ನಡೆದ ಕನ್ನಡ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಆ ಚಳುವಳಿಯೇ ಗೋಕಾಕ್ ಚಳುವಳಿ.

 

ಅತಿ ದೊಡ್ಡ ಮಟ್ಟದಲ್ಲಿ ನಡೆದ ಚಳುವಳಿಯನ್ನು ಕನ್ನಡದ ರಾಜಕೀಯ ಪಕ್ಷಗಳು, ಕನ್ನಡ ಭೋದಕ ವರ್ಗದವರು, ವಿದ್ಯಾರ್ಥಿಗಳು, ಕವಿಗಳು, ನಾಟಕಕಾರರು,ಚಿತ್ರರಂಗದ ಗಣ್ಯರು, ವಿಮರ್ಶೆಕಾರರಾದಿಯಾಗಿ ಅನೇಕರು ಪ್ರೋತ್ಸಾಹಿಸಿದರು. ಹಲವಾರು ದಿನಗಳು ನಡೆದ ಬೃಹತ್ ಚಳುವಳಿ ಸರ್ಕಾರವನ್ನು ಆಗ್ರಹಿಸುವುದರಲ್ಲಿ ಸಫಲವಾಯಿತು. ಅದರ ಫಲವಾಗಿ ಕರ್ನಾಟಕ ಸರ್ಕಾರ ಜುಲೈ 5, 1980 ರಲ್ಲಿ ಶಾಲಾ ಶಿಕ್ಷಣದ ಭಾಷಾ ನೀತಿ ಮರುಯೋಜನೆಗೆ ಸಮಿತಿಯೊಂದನ್ನು ರಚಿಸಿತು ಹಾಗು ವಿ.ಕೃ ಗೋಕಾಕರನ್ನೇ ಆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here