ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಗೆ ಸಿಲುಕಿ ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಧಾರ್ಮಿಕ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಹರಕೆ ರೂಪದಲ್ಲಿ ಸಂಗ್ರಹವಾಗಿರುವಂತಹ ಸೀರೆ, ವಸ್ತ್ರಗಳನ್ನು ವಿತರಣೆ ಮಾಡುವ ಅತ್ಯತ್ತಮವಾದ ಕಾರ್ಯವೊಂದನ್ನು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲುಂಟಾದ ಭಾರೀ‌ ಮಳೆ ಹಾಗೂ ಪ್ರವಾಹದಿಂದ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಜನ ಸಂಕಷ್ಟಕ್ಕೀಡಾಗಿ, ನಿರಾಶ್ರಿತರಾಗಿದ್ದಾರೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು ತೀವ್ರ ಹಾನಿಗೆ ತುತ್ತಾಗಿದ್ದಾರೆ.

ಇಂತಹ ಸಂಕಷ್ಟದಲ್ಲಿ ಜನರಿಗೆ ನೆರವು ನೀಡಲು, ಅವರಿಗೆ ಮೂಲಭೂತ ಅಗತ್ಯ ಗಳಲ್ಲಿ ಒಂದಾದ ಬಟ್ಟೆಗಳನ್ನು ನೀಡಲು ಮಾನವೀಯತೆಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಇಲಾಖೆ ವ್ಯಾಪ್ತಿಯಲ್ಲಿನ ಪ್ರಮುಖ ದೇವಾಲಯಗಳಲ್ಲಿ ಭಕ್ತಾದಿಗಳು ಹರಕೆ ರೂಪದಲ್ಲಿ ದೇವರಿಗೆ ನೀಡುವ ಸೀರೆ ಹಾಗೂ ವಸ್ತ್ರಗಳನ್ನು ಸಂತ್ರಸ್ತರಿಗೆ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಸಂತ್ರಸ್ತರಿಗೆ ವಸ್ತ್ರಗಳನ್ನು ಪೂರೈಸಲು ದೇವಾಲಯಗಳಲ್ಲಿ ಲಭ್ಯವಿರುವ ಸೀರೆ, ವಸ್ತ್ರಗಳನ್ನು ಸಂಗ್ರಹ ಮಾಡಿ ಆಗಸ್ಟ್‌ 12ರಂದು ಮಧ್ಯಾಹ್ನದ ಒಳಗಾಗಿ ಬೆಳಗಾವಿ ಜಿಲ್ಲಾಧಿಕಾರಿ ವಶಕ್ಕೆ ನೀಡಬೇಕೆಂದು, ಇದರ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೇಲುಸ್ತುವಾರಿ ವಹಿಸಬೇಕೆಂದು‌ ತಿಳಿಸಲಾಗಿದೆ.

ದೇವಾಲಯಗಳಿಂದ ಸಂಗ್ರಹಿಸಲಾಗುವ ಒಟ್ಟು ಬಟ್ಟೆ ಹಾಗೂ ಅದನ್ನು ಯಾವ ರೀತಿವಿತರಣೆ ಮಾಡಲಾಗಿದೆ ಎಂಬ ಅಂಕಿ-ಅಂಶಗಳೊಂದಿಗೆ ಸ್ವೀಕೃತಿ ನಿರ್ವಹಿಸಬೇಕೆಂದು, ಜೊತೆಗೆ ಇದರ ಸಾಗಾಣಿಕೆ ಮಾಡಲು ಆಗುವ ವೆಚ್ಚವನ್ನು ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಾಗೂ ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ನಿಧಿಯಿಂದ ಭರಿಸಬೇಕೆಂದು ಕಂದಾಯ ಇಲಾಖೆಯ ಆದೇಶದಲ್ಲಿ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರದ ಈ ನಡೆ ನಿಜಕ್ಕೂ ಒಂದು ಉತ್ತಮ ಕಾರ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here