ಮನೆಗೆ ಗುರು ಇನ್ನಿಲ್ಲ ಎಂಬ ಸುದ್ದಿ ಬಂದಾಗ ನಾವು ನಂಬಿರಲಿಲ್ಲ. ಆ ಸುದ್ದಿ ಸುಳ್ಳಾಗಿರಲೆಂದು ನಾನು‌ ಮಹದೇಶ್ವರ ಸ್ವಾಮಿಗೆ ಹರಕೆ ಕಟ್ಟಿದ್ದೆ…………..ಸಿಆರ್ ಪಿಎಫ್ ಯೋಧರು ಸಂಚರಿಸುತ್ತಿದ್ದ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಯೋಧರ ಹುತಾತ್ಮಕ್ಕೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಸರ್ಕಾರ ಕಠಿಣ ನಿರ್ಧಾರ ಕೈಗೊಂಡು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹುತಾತ್ಮ ಗುರುವಿನ ಪತ್ನಿ ಕಲಾವತಿ ಒತ್ತಾಯಿಸಿದ್ದಾರೆ.

ನಿನ್ನೆ ಹುತಾತ್ಮ ಗುರುವಿನ ಮನೆಗೆ ಭೇಟಿ ನೀಡಿದ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ರಾಜಕೀಯ ನಾಯಕರಲ್ಲಿ ಕಲಾವತಿ ಮಾಡುತ್ತಿದ್ದ ಮನವಿಯೊಂದೆ, ನನ್ನ ಪತಿಯನ್ನು ಅಥವಾ ದೇಶ ಕಾಯುವ ವೀರಯೋಧರನ್ನು ಕೊಂದು ಅವರಿಗೇನು ಸಿಕ್ಕಿತು? ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕು, ಆಗ ಮಾತ್ರ ನನ್ನ ಪತಿ ನೆಮ್ಮದಿಯಿಂದ ಸ್ವರ್ಗ ಸೇರಲು ಸಾಧ್ಯ ಎಂದು ಹೇಳಿದ್ದಾರೆ. 22 ವರ್ಷದ ಕಲಾವತಿ ಮತ್ತು 33 ವರ್ಷದ ಯೋಧ ಗುರುವಿಗೆ 7 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.

ಉಗ್ರರು ಗುರುವನ್ನು ಕೊಲ್ಲುವ ಮೂಲಕ ಯುವತಿ ಕಲಾವತಿಯ ಎಲ್ಲಾ ಕನಸುಗಳು ನುಚ್ಚು ನೂರಾಗಿವೆ. ಕಳೆದ ಗುರುವಾರ ಸಾಯಂಕಾಲ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ತಮ್ಮ ಪತಿ ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ಬಂದಾಗ ಆರಂಭದಲ್ಲಿ ಕಲಾವತಿ ನಂಬಿರಲಿಲ್ಲವಂತೆ. ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ದೂರವಾಣಿ ಕರೆ ಮಾಡಿ ಹೇಳಿದರೂ ಕೂಡ ನಂಬುವ ಸ್ಥಿತಿಯಲ್ಲಿರಲಿಲ್ಲವಂತೆ. ಆಕೆ ಮತ್ತು ಗುರುವಿನ ತಾಯಿ ಚಿಕ್ಕತಾಯಮ್ಮ ತಮ್ಮ ಮನೆ ದೇವರು ಮಹದೇಶ್ವರನಿಗೆ ದೀಪ ಹಚ್ಚಿ ಎಲ್ಲಾ ಯೋಧರು ಸುರಕ್ಷಿತವಾಗಿರಲಿ ಎಂದು ಬೇಡಿಕೊಂಡಿದ್ದರಂತೆ.

ಗುರುವಿನ ಸ್ನೇಹಿತ ಯೋಗೇಶ್ ಗುರುವಾರ ಸಂಜೆ ಕರೆ ಮಾಡಿ ರಜೆ ಮುಗಿಸಿಕೊಂಡು ಜಮ್ಮುವಿಗೆ ಕೆಲಸಕ್ಕೆ ಹೋಗಿ ಸೇರಿದ ಗುರು ಮತ್ತು ಇತರ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಕಲಾವತಿಗೆ ಹೇಳಿದ್ದರಂತೆ. ಆರಂಭದಲ್ಲಿ ಕಲಾವತಿ ನಂಬಿರಲೇ ಇಲ್ಲ, ತನ್ನ ಪತಿಗೆ ಏನೂ ಆಗಿರಲಿಕ್ಕಿಲ್ಲ ಎಂಬ ವಿಶ್ವಾಸ, ಕೊನೆಗೆ ಶುಕ್ರವಾರ ನಸುಕಿನ ಜಾವ ರಕ್ಷಣಾ ಸಚಿವಾಲಯ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರನ್ನು ಬಿಡುಗಡೆ ಮಾಡಿದಾಗಲೇ ಕಲಾವತಿ ಮತ್ತು ಮನೆಯವರಿಗೆ ಗುರು ಹುತಾತ್ಮರಾಗಿದ್ದಾರೆ ಎಂದು ಖಚಿತವಾದದ್ದು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here