ಕಳೆದ ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ.‌ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸಿದರೂ, ಮೂಲ ಸೌಕರ್ಯಗಳನ್ನು ಹೊಂದಿರದೆ, ಸಮಸ್ಯೆಗಳನ್ನು ಹೊಂದಿರುವ ಸರ್ಕಾರಿ ಶಾಲೆಯೊಂದು ಹಾಸನ ಜಿಲ್ಲೆಯ ಮಲ್ಲಿಪಟ್ಟಣ ಎಂಬಲ್ಲಿದೆ. ಶೈಕ್ಷಣಿಕವಾಗಿ ಕಳೆದ ಮೂರು ವರ್ಷಗಳಿಂದ ಸಾಧನೆಗೈದರೂ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಸರ್ಕಾರ ವನ್ನು ಏನೆಂದು ಕರೆಯಬೇಕೋ ತಿಳಿದಿಲ್ಲ.‌ ಪ್ರತಿ ಬಜೆಟ್ ನಲ್ಲಿಯೂ ಕೋಟಿಗಟ್ಟಲೆ ಹಣ ಶೈಕ್ಷಣಿಕಾಭಿವೃದ್ಧಿಗಾಗಿ ಎಂದು ಹೇಳುತ್ತಿದ್ದರೂ, ಇಂತಹ ಶಾಲೆಗಳಿರುವುದರ ಅರ್ಥ ಏನೆಂಬುದು ಯಾರಿಗೂ ತಿಳಿಯದು.ಶಾಲಾ‌ ಕಟ್ಟಡದಲ್ಲಿ ಒಟ್ಟು ಎಂಟು ಕೊಠಡಿಗಳಿದ್ದು, ಅವುಗಳಲ್ಲಿ ಎರಡನ್ನು ಕಛೇರಿ ಕೆಲಸಕ್ಕಾಗಿ ಮೀಸಲಿಡಲಾಗಿದೆ. ಉಳಿದ ಆರು ಕೊಠಡಿಗಳಲ್ಲಿ ಮೂರು ಮಳೆ ಬಂದರೆ ಸಂಪೂರ್ಣವಾಗಿ ಜಲಮಯವಾಗುತ್ತದೆ.

ಮಳೆ ನೀರಿನಿಂದ ತಮ್ಮ‌ ಪುಸ್ತಕ ಹಾಗೂ ಬ್ಯಾಗ್ ಗಳನ್ನು ನೆನೆಯದಂತೆ ತಡೆಯಲು ತಮ್ಮ ಛತ್ರಿಗಳನ್ನು ತೆರೆದು ಕುಳಿತುಕೊಳ್ಳುವಂತಹ ಪರಿಸ್ಥಿತಿ.ಕೇವಲ‌ ಛಾವಣಿಯ ಸ್ಥಿತಿ ಇದಲ್ಲ. ಗೋಡೆಗಳು ಕೂಡಾ ಶಿಥಿಲಾವಸ್ಥೆಯನ್ನು ತಲುಪಿವೆ‌.ಕಳೆದ ಮೂರು ವರ್ಷಗಳಿಂದ ಅತ್ಯುತ್ತಮ ಸಾಧನೆ ಮಾಡುತ್ತಿದ್ದರೂ, ಪಕ್ಕದ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುತ್ತಿದ್ದರೂ, ಇದುವರೆವಿಗೂ ಈ ಶಾಲೆಯ ಕಡೆ ಸರ್ಕಾರ ಗಮನ ಹರಿಸಿಲ್ಲ ಎಂಬುದು ವಿಷಾದನೀಯ. ಶಾಲೆಯಲ್ಲಿ ಸುಮಾರು 160 ವಿದ್ಯಾರ್ಥಿಗಳಿದ್ದು, ಇಷ್ಟೆಲ್ಲಾ ನ್ಯೂನ್ಯತೆಗಳ ನಡುವೆಯೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.

ಶಾಲೆಗೆ ಸಂಬಂಧಿಸಿದಂತೆ ಒಟ್ಟು 5 ಎಕರೆ ಭೂಮಿಯನ್ನು ಹೊಂದಿದ್ದು, ಇದಕ್ಕೆ ಸೂಕ್ತ ಬೇಲಿಯನ್ನು ಕೂಡಾ ಹಾಕಿಸಲಾಗಿಲ್ಲ.ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಿಡಬ್ಲ್ಯೂಡಿ ಹೆಚ್.ಡಿ.ರೇವಣ್ಣ ಕೂಡಾ ಹಾಸನ ಜಿಲ್ಲೆಯವರೇ ಆಗಿದ್ದು, ಅವರ ಜಿಲ್ಲೆಯಲ್ಲೇ ಶಾಲೆಯ ಪರಿಸ್ಥಿತಿ ಹೀಗಿರುವುದು ವಿಷಾದನೀಯವಾಗಿದೆ. ಕಳೆದ ವರ್ಷ ಜಿಲ್ಲಾ ಪಂಚಾಯತಿ ನೀಡಿದ ಅನುದಾನದಿಂದ ಶಾಲೆಯನ್ನು ಸ್ವಲ್ಪ ಮಟ್ಟಿಗೆ ದುರಸ್ತಿ ಮಾಡಲಾಗಿದೆಯಾದರೂ, ಮಳೆ ಬಂದಾಗ ಗೋಡೆಗಳು ಕುಸಿದು ಬಿಡುವವೇನೋ ಎಂಬ ಭಯದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here