ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾದ ಎಚ್​.ಡಿ.ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಪ್ರಸಕ್ತ ವರ್ಷದ ಬಜೆಟ್​ ಮಂಡನೆ ವೇಳೆ ಸಾಲಮನ್ನಾ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲದೆ 2019-2020 ರ ಹಣಕಾಸು ವರ್ಷದೊಳಗೆ ರಾಜ್ಯದ ರೈತರ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನುವ ಭರವಸೆಯನ್ನು ನೀಡಿದ್ದರು. ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕ್​ಗಳಲ್ಲಿ ಸಾಲ ಇರುವ ರೈತರಿಗೆ, ತಮ್ಮ ಸಾಲವನ್ನು ಮನ್ನಾ ಮಾಡುವ ಹಂತಗಳನ್ನು ಅಂಕಿಸಂಖ್ಯೆಗಳ ಸಹಿತ ವಿವರಿಸಿದ್ದರು.

ಆದರೆ ಅನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಆದರೆ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ರೈತರಲ್ಲಿ ಹಲವು ಗೊಂದಲಗಳು ಹಾಗೇ ಉಳಿದು ಕೊಂಡಿದ್ದರು‌. ಈಗ ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ಟ್ವೀಟ್​ ಒಂದನ್ನು ಮಾಡಿರುವ ಕುಮಾರಸ್ವಾಮಿಯವರು ರೈತರಿಗಾಗಿ ಸಹಾಯವಾಣಿ ನಂಬರ್​ ನೀಡಿದ್ದಾರೆ.

ಕುಮಾರ ಸ್ವಾಮಿ ಅವರು ತಮ್ಮ ಟ್ವೀಟ್ ನಲ್ಲಿ, ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ ‘ಬೆಳೆಸಾಲಮನ್ನಾ ಸಹಾಯವಾಣಿ’ ಆರಂಭಿಸಿದ್ದೇನೆ. ರೈತರು ತಮ್ಮ ಮನೆಯಿಂದಲೇ 9164305868 ನಂಬರ್ ಗೆ ಬೆಳಗ್ಗೆ 10 ರಿಂದ 5 ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು ಎಂದು ಪೋಸ್ಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here