ಪರಮಪೂಜ್ಯ ಸಿದ್ದಗಂಗಾ ಸ್ವಾಮೀಜಿಗಳು ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ಸಂಜೆಯಿಂದ ವೈದ್ಯರಿಗೆ ಅಚ್ಚರಿಯಾಗುವಂತೆ ಚೇತರಿಕೆ ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.ಶುಕ್ರವಾರ ಸಂಜೆ ವೇಳೆಗೆ ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಶ್ರೀಗಳ ಭೇಟಿ ಮಾಡಿ, ವೈದ್ಯರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದಲ್ಲಿ ಸ್ಥಿರತೆ ಕಾಣುತ್ತಿದ್ದೇವೆ. ದೈಹಿಕವಾಗಿ ಕ್ಷೀಣಿಸಿದರೂ ದೈವ ಶಕ್ತಿಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ.ಕಳೆದ 12-13 ದಿನಗಳಿಂದ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದ ಶ್ರೀಗಳು ಗುರುವಾರ ಸಂಜೆಯಿಂದ ಸ್ವಾಭಾವಿಕವಾಗಿ ಉಸಿರಾಡುತ್ತಿದ್ದಾರೆ.

ಇದು ಆರೋಗ್ಯಕರ ಬೆಳವಣಿಯಾಗಿದೆ ಎಂದರು.ಶ್ರೀಗಳು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ನಮ್ಮೆಲ್ಲರಿಗೂ ಅವರ ದರ್ಶನ ಸಿಗುತ್ತೆ ಎಂಬ ವಿಶ್ವಾಸ ಇದೆ. ಶ್ರೀಗಳು ಇಂದು ಚೇತರಿಕೆಯಾಗುತ್ತಿರೋದು ಪವಾಡವೇ ಸರಿ. ಭಕ್ತರು ಯಾವುದೇ ಗಾಬರಿ ಪಡುವ ಅವಶ್ಯಕತೆಯಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರೂ ಶ್ರೀಗಳಲ್ಲಿ ಪವಾಡ ಸದೃಶವಾಗಿ ಚೇತರಿಕೆ ಕಂಡು ಬರುತ್ತಿದೆ. ನಾನು ಈ ರೀತಿಯ ಪವಾಡವನ್ನ ಎಲ್ಲೂ ನೋಡಿರಲಿಲ್ಲ.ಇದು ವೈದ್ಯರಿಗೂ ಒಂದು ರೀತಿಯ ಅಚ್ಚರಿಯಾಗಿದೆ. ಹೆಚ್ಚಿನ ಚಿಕಿತ್ಸೆಗೆ ಎಲ್ಲಿಗೂ ರವಾನೆ ಮಾಡುವ ಆಲೋಚನೆಯಿಲ್ಲ.

ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡುವಂತೆ ಅಂದಿನ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಮನವಿ ಮಾಡಿದ್ದೆ. ಸಾಧನೆ ಆಧಾರದ ಮೇಲೆ ಅರ್ಹವಾಗಿಯೇ ಭಾರತರತ್ನ ಸಿಗಬೇಕು. ಅನಿವಾರ್ಯವಾದರೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ‌ ತಿಳಿಸಿದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here