ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಗಳಿಲ್ಲ, ವೆಂಟಿಲೇಟರ್ ಗಳ ಕೊರತೆ ಇದೆ. ಇದಕ್ಕೆ ಸ್ವಯಂ ಪ್ರೇರಿತ ಲಾಕ್ ಡೌನ್ ಒಂದೇ ಪರಿಹಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳೇ, ನೀವು COVID-19 ನಿಂದ ಪಾರಾಗಲು ಈಗ ಉಳಿದಿರುವುದು ಒಂದೇ ದಾರಿ. ಮನೆಯಲ್ಲೇ ಉಳಿದು ನೀವೇ ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತಲೂ ಹಣ ಮುಖ್ಯವಲ್ಲ.‌ ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ ಜೀವನ ಈಗ ನಿಮ್ಮ ಕೈಯಲ್ಲಿದೆ.

ರಾಜ್ಯ ಸರ್ಕಾರ ಕೂಡ ಇದನ್ನೇ ಪರೋಕ್ಷವಾಗಿ ಹೇಳುತ್ತಿದೆ. ಕೊರೋನಾ ವೈರಸ್ ಸಮೂಹ ಪ್ರಸರಣದ ಈಗಿನ ಸ್ಥಿತಿಯಲ್ಲಿ ಮನೆಯಲ್ಲಿರುವುದೇ ‘ಮನೆ ಮದ್ದು’. ಈ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ನಿಗದಿಪಡಿಸಿರುವುದು ದಿನಕ್ಕೆ 10-15 ಸಾವಿರ ರೂ. ಈ ದರ ಬಡವರಿಗಿರಲಿ, ಮೇಲ್ಮಧ್ಯಮವರ್ಗದವರಿಗೂ ಭರಿಸಲು ಸಾಧ್ಯವಾಗದು.

ಒಂದು ಕುಟುಂಬದ ನಾಲ್ಕು ಜನರಿಗೆ ಕೊರೊನಾ ಬಂದರೆ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರದ ಪ್ರಕಾರ 5-6 ಲಕ್ಷ ರೂ ಬೇಕು. ಬಡವರು ಮಧ್ಯಮವರ್ಗದವರು ಎಲ್ಲಿಂದ ತರುತ್ತಾರೆ? ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ನಮ್ಮ ಜೀವ ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಎಚ್ಚರದಿಂದಿರಿ ಇದು ರಾಜ್ಯದ ಜನತೆಗೆ ನನ್ನ ಕಳಕಳಿಯ ಮನವಿ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here