ಧಾರ್ಮಿಕ ಕಟ್ಟಳೆಗಳನ್ನು ಮೀರಿ, ಸರ್ವ ಧರ್ಮ ಸಹಿಷ್ಣುತೆ ಮೆರೆಯುವಂತಹ ಒಂದು ವಿವಾಹ ಕೇರಳದಲ್ಲಿ ನಡೆದು ಎಲ್ಲರ ಗಮನವನ್ನು ಸೆಳೆದಿದೆ. ಕೇರಳದ ಕಾಯಂಕುಲಂನ ಮಸೀದಿಯಲ್ಲಿ ನಿನ್ನೆಯ ದಿನ ಅಂದರೆ ಭಾನುವಾರ ಹಿಂದೂ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಚೆರಾವಳಿ ಮುಸ್ಲಿಂ ಜಮಾತ್ ಮಸೀದಿಯ ಸಮಿತಿಯು ಮಗಳ ಮದುವೆಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡಲಾಗದ ಅಸಹಾಯಕ ಮಹಿಳೆಯೊಬ್ಬರಿಗೆ ಸಹಾಯ ಹಸ್ತವನ್ನು ನೀಡಿದ್ದು, ಆಕೆಯ ಮಗಳ ಮದುವೆಯನ್ನು ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಿ, ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಕಪಿಲ್ ಶಶಿ ಮತ್ತು ಅಂಜು ಅಶೋಕ್ ಕುಮಾರ್ ಎಂಬ ಜೋಡಿಯು ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸುಮಾರು ನಾಲ್ಕು ಸಾವಿರ ಮಂದಿ ಹಿಂದೂ ಮುಸ್ಲಿಂ ಹಾಗೂ ಇತರರು ಈ ಮದುವೆಗೆ ಸಾಕ್ಷಿಯಾದರು. ಮದುವೆ ಹಾಗೂ ಸಸ್ಯಾಹಾರ ಅಡುಗೆಯ ಎಲ್ಲಾ ಖರ್ಚನ್ನು ಮಸೀದಿ ಸಮಿತಿ ವಹಿಸಿಕೊಂಡಿದ್ದು, ಮದುವೆಯ ನಂತರ ವಧು ವರ ಇಬ್ಬರೂ ಮಸೀದಿಯನ್ನು ಪ್ರವೇಶಿಸಿ ಅಲ್ಲಿನ ಹಿರಿಯರ ಆಶೀರ್ವಾದ ಪಡೆದಿದ್ದಾರೆ. ಆ ಮೂಲಕ ಮಸೀದಿ ಪ್ರವೇಶಿಸಿದ ಮೊದಲ ಮಹಿಳೆಯಾಗಿದ್ದಾರೆ ಅಂಜು.

 

ಮಸೀದಿಯ ಸಮಿತಿಯ ಸೆಕ್ರೆಟರಿ ಆದಂತಹ ನಜುಮುದ್ದೀನ್ ಅವರು ಅಂಜು ಅವರಿಗೆ ಸಮಿತಿಯ ಕಡೆಯಿಂದ ಹತ್ತು ಸವರನ್ ಬಂಗಾರ, ಎರಡು ಲಕ್ಷ ಮದುವೆ ಉಡುಗೊರೆ ಹಾಗೂ ಮನೆಯ ಅಗತ್ಯ ವಸ್ತುಗಳನ್ನು ಕೂಡಾ ಬಳುವಳಿಯಾಗಿ ನೀಡಿದ್ದಾರೆ. ಅಲ್ಲದೆ ಅವರು ಈ ವಿವಾಹದ ಮೂಲಕ ಅಂಜು ಮಸೀದಿ ಪ್ರವೇಶ ಮಾಡಿದ ಮೊದಲ ಸ್ತ್ರೀ ಎಂದು ಕೂಡಾ ಬಹಳ ಸಂತೋಷದಿಂದ ಹೇಳಿದ್ದಾರೆ. ಧರ್ಮಾತೀತವಾದ ಇಂತಹ ಮಾನವೀಯ ಕಾರ್ಯಗಳು ನಮ್ಮ ಸಮಾಜಕ್ಕೆ ಆದರ್ಶವಾಗಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here