ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರದ ಶ್ರೀ ಗವಿರಂಗನಾಥಸ್ವಾಮಿ ದೇವಸ್ಥಾನ ಚಿತ್ರದುರ್ಗ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಒಂದು. ಶ್ರೀ ವಿಷ್ಣು ಕೂರ್ಮರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ನಂಬಿಕೆ.

ಅಮೃತಕ್ಕಾಗಿ ಕ್ಷೀರಸಾಗರವನ್ನು ಕಡೆಯಲು ದೇವತೆಗಳು ಶ್ರೀಮಂದರ ಪರ್ವತವನ್ನು ಕಡಗೋಲಾಗಿಯೂ ವಾಸುಕಿಯನ್ನು ಹಗ್ಗವನ್ನಾಗಿಯೂ ಬಳಸಿಕೊಂಡರು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಥನದ ಸಂದರ್ಭದಲ್ಲಿ ಶ್ರೀಮಂದರ ಪರ್ವತ ಕ್ಷೀರ ಸಾಗರದಲ್ಲಿ ಮುಳುಗತೊಡಗಿದಾಗ ದೇವತೆಗಳು ವಿಷ್ಣುವನ್ನು ಪಾರ್ಥಿಸಿದರೆಂದೂ ಆಗ ಅವನು ಕೂರ್ಮ ರೂಪದಲ್ಲಿ ಅವತರಿಸಿ ಶ್ರೀಮಂದರ ಪರ್ವತವನ್ನು ಮೇಲಕ್ಕೆ ಎತ್ತಿ ನಿಲ್ಲಿಸಿ ಸಮುದ್ರಮಥನ ಕಾರ್ಯ ಸುಗಮವಾಗಿ ನಡೆಯಲು ಕಾರಣನಾಗುತ್ತಾನೆ.

 

ಅಮೃತದ ಜೊತೆಯಲ್ಲಿಯೇ ಉದ್ಭವಿಸಿದ ಶ್ರೀ ಲಕ್ಷ್ಮಿಯನ್ನು ವಿಷ್ಣುವರಿಸುತ್ತಾನೆ. ಆಗ ಅವನು ಶ್ರೀ ಲಕ್ಷ್ಮೀ ನಾರಾಯಣನಾದ. ಆ ಲಕ್ಷ್ಮಿನಾರಾಯಣನೇ ಶ್ರೀ ಲಕ್ಷ್ಮಿರಂಗನಾಥ ಎಂಬುದು ಭಕ್ತರ ನಂಬಿಕೆ. ವಿಷ್ಣು ಗವಿರಂಗಾಪುರದಲ್ಲಿ ಕೂರ್ಮರೂಪಿ ರಂಗನಾಥನಾಗಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ ಎಂಬ ನಂಬಿಕೆ ಜನರಲ್ಲಿದೆ.

ಭಾರತದಲ್ಲಿ ಎರಡು ಕೂರ್ಮವತಾರಿ ವಿಷ್ಣುವಿನ ದೇವಸ್ಥಾನಗಳಿವೆ ಎನ್ನಲಾಗಿದೆ. ಅವುಗಳಲ್ಲಿ ಒಂದು ಆಂಧ್ರ ಪ್ರದೇಶದ ಶ್ರೀಕಾಕುಳಂನಿಂದ 13ಕಿ.ಮೀ ಇರುವ ಶ್ರೀಕೂರ್ಮಂನಲ್ಲಿದೆ. ಮತ್ತೊಂದು ದೇವಸ್ಥಾನ ಗವಿರಂಗಾಪುರದಲ್ಲಿದೆ.

ದೊಡ್ಡೆಡೆ ಸೇವೆ: ಇದು ಈ ಕ್ಷೇತ್ರದ ವಿಶೇಷ ಸೇವೆ. ದೊಡ್ಡಎಡೆ ಸೇವೆ ಮಾಡಿಸುವ ಹರಕೆ ಹೊತ್ತ ಭಕ್ತರು ಎಡೆಗೆ ನಿಗದಿಯಾದ ಪ್ರಮಾಣದ ಅಕ್ಕಿಯನ್ನು ಬೇಯಿಸಿ ಅನ್ನವನ್ನು ಶ್ರೀ ಕೆಂಚರಾಯ ಮತ್ತು ಶ್ರೀಕಾಡರಾಯ ದೇವಸ್ಥಾನಗಳ ಮುಂದಿನ ಹಾಸುಗಲ್ಲಿನ ಮೇಲೆ ಹರಡುತ್ತಾರೆ. ಅದಕ್ಕೆ ನಿರ್ದಿಷ್ಟ ಪ್ರಮಾಣದ ತುಪ್ಪ, ಬೆಲ್ಲ ಬಾಳೆಹ ಇತ್ಯಾದಿಗಳನ್ನು ಸೇರಿಸಿ ಎಡೆ ತಯಾರಿಸುತ್ತಾರೆ. ಆನಂತರ ದಾಸಯ್ಯ ಸಮೂಹದವರು ಎಡೆಯ ಸುತ್ತ ಕುಳಿತು ಅದನ್ನು ಭೋಜನ ರೂಪದಲ್ಲಿ ತಿನ್ನುತ್ತಾರೆ. ಈ ಸಂದರ್ಭದಲ್ಲಿ ನಾದಸ್ವರ ವಾದನ ನಡೆಯುತ್ತದೆ. ಈ ವಿಶೇಷ ಸೇವೆ ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದೆ.

 

ಅನಂತಶಯನ, ಲಕ್ಷ್ಮಿ, ಮಾರುತಿ, ಮಲ್ಲೇಶ್ವರ ದೇವಸ್ಥಾನಗಳು ಇಲ್ಲಿವೆ. ಶ್ರೀ ಲಕ್ಷ್ಮೀರಂಗನಾಥ, ಗವಿ ರಂಗನಾಥ ಸ್ವಾಮಿ ಎಂಬುದಾಗಿ ಕರೆಸಿಕೊಳ್ಳುವ ಕೂರ್ಮರೂಪಿ ರಂಗನಾಥನಿಗೆ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲ ಮತಗಳ ಜನರು ನಡೆದುಕೊಳ್ಳುತ್ತಾರೆ. ಐದು ವರ್ಷಗಳಿಗೊಮ್ಮೆ ಚೈತ್ರ ಮಾಸದ ಚಿತ್ತಾ ನಕ್ಷತ್ರದಂದು ಇಲ್ಲಿ ಬ್ರಹ್ಮ ರಥೋತ್ಸವ ನಡೆಯ್ತುತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here