HSRP ನಂಬರ್ ಪ್ಲೇಟ್ ಅಳವಡಿಕೆ: ಬೆಂಗಳೂರಿನಲ್ಲಿ ಮಹತ್ವದ ಸಭೆ..! ವಿಸ್ತರಣೆ ಆಗುತ್ತಾ ದಿನಾಂಕ..?
ಗಾಡಿ ತಗೊಂಡ ಜನರಿಗೆ ಒಂದಲ್ಲ ಒಂದು ತಲೆನೋವು ಇದ್ದೇ ಇರುತ್ತದೆ. ಅದರಲ್ಲೂ ಯಾರೇ ಆಗಲಿ ಗಾಡಿ ಮೇಂಟೇನ್ ಮಾಡೋದು ಒಂದು ತಲೆನೋವಿನ ಕೆಲಸ. ಅದರಲ್ಲೂ ಇದೀಗ ಹೊಸ ತಲೆನೋವು ಜೋರಾಗಿದೆ. ಗಾಡಿಗಳಿಗೆ ಹೊಸ ನಂಬರ್ ಪ್ಲೇಟ್ ಹಾಕಿಸಬೇಕು ಅಂತ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಮಧ್ಯೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದ ಡೆಡ್‌ಲೈನ್ 3 ತಿಂಗಳು ಮುಂದಕ್ಕೆ ಹಾಕುವ ಬಗ್ಗೆ ಚರ್ಚೆ ಶುರುವಾಗಿದೆ..!
ಹೌದು, ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅರ್ಥಾತ್ ಎಚ್‌ಎಸ್‌ಆರ್‌ಪಿ ಅವಳಡಿಸಿಕೊಳ್ಳಲು ಫೆಬ್ರವರಿ 17ರ ಶನಿವಾರ ಕೊನೆಯ ದಿನ. ಆ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮಾಲೀಕರಿಗೆ ಭಾರಿ ದಂಡ ಗ್ಯಾರಂಟಿ. ಹೀಗಾಗಿ ವಾಹನ ಸವಾರರು ಎದ್ದೂ, ಬಿದ್ದು ತಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗಾಗಿ ಮುಂದಾಗಿದ್ದಾರೆ ಹೀಗಾಗಿ ಆನ್‌ಲೈನ್ ನೋಂದಣಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹೀಗಿದ್ದಾಗ ಹೊಸ ತಲೆನೋವು ಶುರುವಾಗಿದ್ದು, ವೆಬ್‌ಸೈಟ್ ಎರರ್ ಬರುತ್ತಿದೆ. ಹೀಗಾಗಿ ಎಚ್‌ಎಸ್‌ಆರ್‌ಪಿಯ ಕೊನೆಯ ಡೇಟ್ ಮತ್ತೆ 3 ತಿಂಗಳು ಮುಂದಕ್ಕೆ ಹೋಗುತ್ತೆ ಎಂಬ ಸುದ್ದಿ ಹಬ್ಬಿದೆ.
1 ಸಾವಿರ ರೂಪಾಯಿ ದಂಡ!
ಅಕಸ್ಮಾತ್ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ. ಫೆಬ್ರವರಿ 17ಕ್ಕೆ ಗಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದಿರುವ ವಾಹನದ ಮಾಲಿಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಎಚ್‌ಎಸ್‌ಆರ್‌ಪಿ ನಿಯಮ ಮೊದಲ ಬಾರಿ ಉಲ್ಲಂಘನೆಗೆ 1 ಸಾವಿರ ರೂಪಾಯಿ ದಂಡ ವಿಧಿಸುತ್ತಾರೆ. ನಂತರದ ಉಲ್ಲಂಘನೆಗೆ, ಪ್ರತಿ ಬಾರಿ 1 ಸಾವಿರ ರೂಪಾಯಿ ದಂಡ ಗ್ಯಾರಂಟಿ. ಹೀಗಿದ್ದಾಗಲೇ ಸರ್ವರ್ ಸಮಸ್ಯೆ ಸೇರಿ ಹಲವು ಕಾರಣದಿಂದ, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಡೇಟ್ ವಿಸ್ತರಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ 3 ತಿಂಗಳು ಮುಂದಕ್ಕೆ ಹೋಗುತ್ತೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಮಹತ್ವದ ಸಭೆ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಹಿರಿಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಕನಿಷ್ಠ 3 ತಿಂಗಳ ಮಟ್ಟಿಗೆ ಮುಂದೆ ಹೋಗುತ್ತೆ ಈ ಡೆಡ್‌ಲೈನ್ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಈ ಬಗ್ಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ವಾಹನಗಳ ಮಾಲೀಕರಿಗೆ ಇದರಿಂದ, ಬಿಗ್ ರಿಲೀಫ್ ಸಿಗಲಿದೆ ಎಂಬ ನಿರೀಕ್ಷೆ ದಟ್ಟವಾಗಿದೆ.
ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಹಾಗೇ ನೀವು ನಂಬರ್ ಪ್ಲೇಟ್ ಅಳವಡಿಕೆ ಸಮಯದಲ್ಲಿ ಸರ್ಕಾರ ಸೂಚಿಸಿದ ವೆಬ್‌ಗೆ ಮಾತ್ರ ಭೇಟಿ ನೀಡಬೇಕು. ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕು. ಇನ್ನೆನು ಕೆಲವೇ ಸಮಯದಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.