ಕಳೆದ ಕೆಲವು ದಿನಗಳಿಂದಲೂ ದೇಶದ ಗಮನ ಗಡಿಯತ್ತ ನೆಟ್ಟಿದೆ‌. ಕಾರಣ ಚೀನಾ ಮತ್ತು ಭಾರತದ ನಡುವೆ ಉಂಟಾಗಿದ್ದ ಗಡಿ ಭಾಗದಲ್ಲಿನ ಸಮಸ್ಯೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾದ ನಡುವೆ ಗಡಿಯಲ್ಲಿ ನಡೆದ ಮೂರನೇ ಹಂತದ ಮಿಲಿಟರಿ ಮಾತುಕತೆ ಬಳಿಕ ಚೀನಾ ಮತ್ತು ಭಾರತದ ಎರಡು ಸೇನೆಗಳು ಕೂಡಾ ವಾಸ್ತವ ಗಡಿ ರೇಖೆಯಿಂದ 1.5 ಕಿಲೋಮೀಟರ್ ಹಿಂದೆ ಸರಿದಿದೆ. ಈ ಮೂಲಕ ಪೂರ್ವ ಲಡಾಕ್ ಗಡಿಯಲ್ಲಿ ಎರಡು ದೇಶಗಳ ನಡುವೆ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿಯು ಈಗ ತಣ್ಣಗಾಗುವ ವಾತಾವರಣ ಅಲ್ಲಿ ಕಂಡು ಬರುವ ಲಕ್ಷಣಗಳು ಗೋಚರವಾಗುತ್ತಿವೆ. ಇಂದು ಬೆಳಿಗ್ಗೆ ಗಾಲ್ವಾನ್ ನದಿ ಕಣಿವೆಯ ಪ್ರದೇಶದಲ್ಲಿ ಇರುವ ಪಾಯಿಂಟ್ ನಂಬರ್ 14, ಬಿಸಿ ನೀರಿನ ಬುಗ್ಗೆ ಗಳು ಹಾಗೂ ಗೋರ್ಗಾ ಪ್ರದೇಶದಿಂದ ಎರಡೂ ದೇಶಗಳ ಸೇನೆಗಳು ಹಿಂದೆ ಸರಿದಿವೆ ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶದಲ್ಲಿ ಕೆಲವು ದಿನಗಳಿಂದ ಚೀನಾ ತಾನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿದ್ದ ಟೆಂಟ್ ಗಳನ್ನು ಕೂಡಾ ತೆರವು ಮಾಡಿದ್ದು, ಗಡಿಯಲ್ಲಿ ನಿಲ್ಲಿಸಿದ್ದ ತನ್ನ ಸೇನಾ ವಾಹನಗಳನ್ನು ಎರಡು ಕಿಮೀ ಹಿಂದಕ್ಕೆ ಒಯ್ಯಲಾಗಿದೆ ಎಂದು ವರದಿ ತಿಳಿಸಿದೆ.
ಇದೇ ಜುಲೈ 1 ರಂದು ಲಡಾಖ್ ನ ಚುಶುಲ್ ಪ್ರದೇಶದಲ್ಲಿ ಮೂರನೇ ಹಂತದ ಮಿಲಿಟರಿ ಮಾತುಕತೆಯು ನಡೆದಿತ್ತು‌.‌ ಈ ಮಾತುಕತೆಗೆ ಭಾರತದ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಮತ್ತು ಚೀನಾ ಸೇನೆ ಪರವಾಗಿ ಮೇಜರ್ ಜನರಲ್ ಲಿಯು ಲೀನ್ ಭಾಗಿಯಾಗಿದ್ದರು.

ಈ ಸಭೆಯಲ್ಲಿ ಪ್ರಸ್ತುತ ಉದ್ವಿಗ್ನತೆಗೆ ಕಾರಣವಾಗಿರುವ ಭಾರತ – ಚೀನಾ ಗಡಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎರಡು ದೇಶಗಳ ಮಿಲಿಟರಿ ಅಧಿಕಾರಿಗಳು ಮಹತ್ವದ ಚರ್ಚೆ ನಡೆಸಿದ್ದರು. ಈ ಸಭೆ ಮುಕ್ತಾಯವಾದ ನಂತರ ಒಂದು ಮಹತ್ವದ ಬೆಳವಣಿಗೆ ನಡೆದಿದ್ದು, ಎರಡು ದೇಶಗಳ ಸೇನೆಯು ವಾಸ್ತವ ಗಡಿ ರೇಖೆಯಿಂದ 1.2 ಕಿಮೀ ಹಿಂದಕ್ಕೆ ಸರಿದಿವೆ. ಜೂನ್ ಆರರಂದು ನಡೆದ ಸಭೆಯ ನಂತರವೂ ಚೀನಾ ಸೇನೆ ಹಿಂದೆ ಸರಿದಿತ್ತಾದರೂ ಟೆಂಟ್ ಗಳನ್ನು ತೆರವು ಮಾಡಿರಲಿಲ್ಲ.‌
ಅದೇ ವಿಚಾರಕ್ಕೆ ಘರ್ಷಣೆ ನಡೆದಿತ್ತು. ಆದರೆ ಈ ಬಾರಿ ಮಾತುಕತೆ ನಂತರ ಚೀನಾ ತನ್ನ ಟೆಂಟ್ ಗಳನ್ನು ತೆರವು ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here