ಪುಲ್ವಾಮ ದುರಂತದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಣ ಕ್ರಿಕೆಟ್ ಪಂದ್ಯಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಮುಂಬರುವ ಕ್ರಿಕೆಟ್​ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪಾಕ್​ ವಿರುದ್ಧ ಆಡಬಾರದು ಎಂಬುದರ ಮೇಲಿನ ಚರ್ಚೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಮುಖಂಡ ಶಶಿ ತರೂರ್​ ಪಾಕ್​ ವಿರುದ್ಧ ಆಡದೇ ಹೊರಗುಳಿಯುವುದು ಶರಣಾಗತಿಗಿಂತ ಬಹಳ ಕೆಟ್ಟದು ಎಂದು ಹೇಳಿದ್ದಾರೆ.ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ತಿರುವನಂತಪುರದ ಕಾಂಗ್ರೆಸ್​ ಸಂಸದ ತರೂರ್​, 1999ರ ಕಾರ್ಗಿಲ್​ ಯುದ್ಧದಂತಹ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲೂ ಭಾರತ, ಪಾಕ್​ ವಿರುದ್ಧ ವಿಶ್ವಕಪ್​ ಆಡಿ, ಗೆಲುವು ಸಾಧಿಸಿತು.

ಆದರೆ, ಈ ಬಾರಿ ಹೋರಾಡದೇ ಸೋಲುವುದು ಶರಣಾಗತಿಗಿಂತ ಕೆಟ್ಟದು ಎಂದು ಎಚ್ಚರಿಸಿದ್ದಾರೆ.ಈ ವಿಚಾರದಲ್ಲಿ ಬಿಜೆಪಿಯನ್ನು ಟೀಕಿಸಿರುವ ತರೂರ್,​ ಉಗ್ರರ ದಾಳಿಯ ನಂತರದ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೇ ಕೇಂದ್ರ ಸರ್ಕಾರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಮಾಧ್ಯಮದಲ್ಲೂ ಮಾತನಾಡಿರುವ ತರೂರ್​, ಮೂರು ತಿಂಗಳಿಗೂ ಮುಂಚೆಯೇ ಪಂದ್ಯವನ್ನು ರದ್ದು ಮಾಡಬೇಕೆಂದು ವಾದಿಸುತ್ತಿರುವ ವ್ಯಕ್ತಿಗಳಿಗೆ ಇದು ಉಗ್ರರ ದಾಳಿಗೆ ಸರಿಯಾದ ಪ್ರತೀಕಾರ ಎಂದು ನಾನು ಊಹಿಸಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಉಭಯ ರಾಷ್ಟ್ರಗಳೆರಡು ವಿಶ್ವಕಪ್​ ಚಾಂಪಿಯನ್​ ಆಗಿವೆ. ಆದರೆ, ಭಾರತ ಎರಡು ಬಾರಿ ವಿಶ್ವಕಪ್​ ಗೆದ್ದಿದೆ. ಅಲ್ಲದೆ, ಎದುರಾಳಿ ಪಾಕ್​ ವಿರುದ್ಧ ಭಾರತ ಎಂದೂ ಜಾಗತಿಕ ಮಟ್ಟದ ಟೂರ್ಣಿಯಲ್ಲಿ ಸೋತಿಲ್ಲ. ಹೀಗಾಗಿ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪಾಕ್​ ಅನ್ನು ಎದುರಿಸಲೇಬೇಕು ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here