ದೇವತೆಗಳಲ್ಲಿ ಎಲ್ಲರ ಕೋಪಕ್ಕಿಂತ ಶನೇಶ್ವರನ ಕೋಪ ಎಂದರೆ ಸರ್ವಲೋಕಗಳಲ್ಲೂ, ದೇವತೆಗಳಾದಿಯಾಗಿ, ಮಾನವರಿಗೂ ಕೂಡಾ ಬಹಳ ಭಯ. ಶನಿಯ ಕೋಪಕ್ಕೆ ಗುರಿಯಾದವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯಲ್ಲದೆ ಅದರಿಂದ ಹೊರಗೆ ಬರಲು ಬಹಳ‌‌ ಕಷ್ಟ ಪಡಬೇಕಾಗುತ್ತದೆ. ಅದಕ್ಕೆ ಆ ದೇವನಿಗೆ ಶನಿವಾರಗಳಂದು ಜನರು ಎಳ್ಳಿನ ದೀಪ ಹಚ್ಚಿ ಭಕ್ತಿಯಿಂದ ಆರಾಧಿಸಿ, ಆ ದೇವರ ಕ್ರೋಧ ದೃಷ್ಟಿ ತಮ್ಮ ಮೇಲೆ ಬೀಳದಿರಲೆಂದು ಆರಾಧಿಸುತ್ತಾರೆ. ಇಂತಹ ಬಹುಬೇಗ‌ ಕುಪಿತನಾಗುವ ದೇವತೆಗಳು ಭಯ ಪಡುವ ದೇವರನ್ನು ಭಾರತದ ಒಂದು ಸ್ಥಳದಲ್ಲಿ ಸ್ತ್ರೀ ರೂಪದಲ್ಲಿ ಆರಾಧನೆ ಮಾಡಲಾಗುತ್ತಿದೆ. ಇದು ಆಶ್ಚರ್ಯ ಎನಿಸಿದರೂ ಕೂಡಾ ಸತ್ಯವಾದ ಮಾತು.

ಗುಜರಾತಿನ ಸಾರಂಗಪುರದಲ್ಲಿರುವ ಕಷ್ಟ ಭಂಜನ ಮಂದಿರದಲ್ಲಿ ಮಹಾಮಹಿಮನಾದ ಶನೇಶ್ವರನನ್ನು ಸ್ತ್ರೀ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಭಾರತದಲ್ಲಿ ಇಲ್ಲಿ ಮಾತ್ರವೇ ಈ ದೇವರನ್ನು ಸ್ತ್ರೀ ರೂಪಿಯಾಗಿ ನೋಡಲು ಸಾಧ್ಯ. ಪುರಾಣ‌‌ ಕಥೆಗಳ ಪ್ರಕಾರ ಒಮ್ಮೆ ಶನಿದೇವನ ಕ್ರೋಧ ದೃಷ್ಟಿ ಭೂಮಿಯ ಮೇಲಿನ ಸಕಲ ಚರಾಚರಗಳ ಮೇಲೆ ಬಿದ್ದು ಎಲ್ಲವೂ ಸಂಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಉಂಟಾದಾಗ, ದೇವತೆಗಳು ಕೂಡಾ ಹೆದರುವ ಶನಿ ದೇವನ ಉಪಟಳವನ್ನು ಕಂಡ ಹನುಮಂತನು ಶನಿ ದೇವನನ್ನು ಹುಡುಕಿ ಹೊರಟಾಗ, ಹನುಮಂತನ ಕೋಪಕ್ಕೆ ಗುರಿಯಾದರೆ ತನ್ನ ಕಥೆ ಮುಗಿಯುವುದೆಂದು ಶನಿದೇವನು ಸ್ತ್ರೀ ರೂಪ ಧರಿಸಿದನಂತೆ.

ಹನುಮಂತ ಬ್ರಹ್ಮಚಾರಿಯಾಗಿದ್ದು, ಸ್ತ್ರೀಯರ ಮೇಲೆ ಪ್ರಹಾರ ಮಾಡುವುದಿಲ್ಲವೆಂಬ ಕಾರಣಕ್ಕೆ. ಅನಂತರ ಅದೇ ರೂಪದಲ್ಲಿ ಬಂದು, ಹನುಮನ ಬಳಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದನಂತೆ. ಅಂದಿನಿಂದ ಈ ಸ್ಥಳದಲ್ಲಿ ಶನಿದೇವರನ್ನು, ಹನುಮಂತನ ಜೊತೆಗೆ ಆರಾಧನೆ ಮಾಡಲಾಗುತ್ತಿದ್ದು, ಶನಿದೇವನು ಧರಿಸಿದನೆನ್ನಲಾದ ಸ್ತ್ರೀ ರೂಪದಲ್ಲೇ ಇಲ್ಲಿ ಆತನ ಆರಾಧನೆ ನಡೆದು ಬಂದಿದೆ. ಈ ಆಲಯದಲ್ಲಿ ಶನಿದೇವನ ವಿಗ್ರಹ, ಹನುಮಾನ್ ವಿಗ್ರಹದ ಪಾದಗಳ ಬಳಿ ಸ್ಥಾಪಿತವಾಗಿದೆ. ಹನುಮಂತನು ಚಿನ್ನ ಹಾಗೂ ಬೆಳ್ಳಿಯಿಂದ ಸ್ಥಾಪಿತವಾಗಿರುವ ಸಿಂಹಾಸನದ ಮೇಲೆ ಕುಳಿತಿರುವಂತೆ ಇದ್ದು, ಚರಣಗಳಲ್ಲಿ ಸ್ತ್ರೀ ರೂಪದಲ್ಲಿ ಶನಿದೇವನ ದರ್ಶನ ಮಾಡಬಹುದು.

ಭಕ್ತರ ಕೋರಿಕೆ ಈಡೇರಿಸಲು ಶನಿಯ ಹಿಂದೆ ಹನುಮನು ಬಿದ್ದು, ಶನಿ ದೇವನಿಂದ ಜನರ ಕಷ್ಟ ಪರಿಹರಿಸಿದ್ದರಿಂದ, ಶನಿಯ ಪ್ರಭಾವಕ್ಕೆ ಒಳಗಾದವರು ಈ ಆಲಯಕ್ಕೆ ಬಂದು, ಹನುಮಂತನ ಆರಾಧನೆ ಮಾಡಿದರೆ ಅವರಿಗೆ ದೋಷ ಪರಿಹಾರವಾಗುತ್ತದೆ ಎಂದು ಕೂಡಾ ಇಲ್ಲಿ ಪ್ರತೀತಿ. ಶನಿ ಪ್ರಕೋಪಕ್ಕೆ ಒಳಗಾದವರು ಭಾರತದ ವಿವಿಧ ಭಾಗಗಳಿಂದ ಈ ಆಲಯಕ್ಕೆ ಬಂದು ಭಗವಾನ್ ಹನುಮಂತನ ಹಾಗೂ ಸ್ತ್ರೀ ರೂಪದ ಶನಿ ಮಹಾತ್ಮನ ದರ್ಶನ ಮಾಡುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here