ಅಭಿನವ್ ಪಾಠಕ್ ಹಾಗೂ ಪರಿಣವ್ ಪಾಠಕ್ ಅವಳಿ ಸಹೋದರರು. ಬಾಲ್ಯದಿಂದಲೂ ಒಬ್ಬರನ್ನೊಬ್ಬರು ಬಿಟ್ಟು ಇರದಷ್ಟು ಗಾಢವಾದ ಸ್ನೇಹ ಹಾಗೂ ಭ್ರಾತೃತ್ವ ಇವರ ಮಧ್ಯೆ ಇದೆ. ಇದೀಗ ಈ ಇಬ್ಬರೂ ಸಹೋದರರು ದೇಶ ಸೇವೆ ಮಾಡಲು ಕೂಡಾ ಜೊತೆಯಾಗಿಯೇ ಹೆಜ್ಜೆ ಇಟ್ಟಿದ್ದಾರೆ. ಇಬ್ಬರೂ ಸಹೋದರರು ಒಟ್ಟಾಗಿ ಭಾರತೀಯ ಸೇನೆಗೆ ಸೇರುವ ಮೂಲಕ ಒಂದು ಹೊಸ ಇತಿಹಾಸವನ್ನು ಬರೆದಿದ್ದಾರೆ. ಹುಟ್ಟಿನಿಂದ ಕೆಲವೇ ನಿಮಿಷಗಳ ವ್ಯತ್ಯಾಸ ಇರುವ ಈ ಸಹೋದರರು ಕಳೆದ ಇಪ್ಪತ್ತೆರಡು ವರ್ಷಗಳಿಂದ ಜೊತೆಯಾಗಿಯೇ ಇದ್ದಾರೆ. ಇಬ್ಬರು ಶಾಲೆಯನ್ನು ಅಮೃತಸರದಲ್ಲಿ ಮುಗಿಸಿದರು. ಅದಾದ ನಂತರ ಇಂಜಿನಿಯರಿಂಗ್ ಮಾಡಲು ಇಬ್ಬರು ಬೇರೆ ಬೇರೆ ಕಾಲೇಜುಗಳಿಗೆ ಹೋಗಬೇಕಾಯಿತು.

 

ಇಂಜಿನಿಯರಿಂಗ್ ಮುಗಿದ ನಂತರ ಇಬ್ಬರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಇಬ್ಬರೂ ಇಂಡಿಯನ್ ಮಿಲಿಟರಿ ಅಕಾಡೆಮಿ ಗೆ ಸೇರಿದರು‌. ಇಬ್ಬರು ಸಹೋದರರ ಬಹುತೇಕ ಆಸಕ್ತಿಗಳು ಒಂದೇ ಆಗಿದ್ದು, ಐಎಂಎ ಅಲ್ಲಿ ಪದವಿಯನ್ನು ಪಡೆದು ಈಗ ಇಬ್ಬರು ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ. ಈ ಬಾರಿಯ ಪಾಸಿಂಗ್ ಔಟ್ ಪೆರೇಡ್ ನಲ್ಲಿ ಪ್ರಮುಖ ಆಕರ್ಷಣೆ ಈ ಸಹೋದರರು. ಈ ಅಕಾಡೆಮಿಯಿಂದ ಪದವಿ ಪಡೆದಿರುವ ಮೊದಲ ಅವಳಿಗಳು ಅಭಿನವ್ ಮತ್ತು ಪರಿಣವ್ ಆಗಿದ್ದಾರೆ. ಬಹಳ ಸಂತಸದಿಂದ ತಮ್ಮ ಕನಸನ್ನು ನನಸು ಮಾಡಿಕೊಂಡ ಸಹೋದರರು ತಾವಿಬ್ಬರೂ ಒಂದೇ ರೀತಿ ಕಾಣುವುದರಿಂದ ಅವರಿಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ತರಬೇತಿಯ ಅವಧಿಯಲ್ಲಿ ಕೋಚ್ ಗಳು ಅಣ್ಣ ತಮ್ಮಂದಿರನ್ನು ಬೇಗ ಗುರುತಿಸಲಾರದೆ ಒಬ್ಬರಿಗೆ ಕೊಡುವ ನಿರ್ದೇಶನ ಇನ್ನೊಬ್ಬರಿಗೆ ಕೊಟ್ಟಿದ್ದು, ಮೆಸ್ ನಲ್ಲಿ ಕೂಡಾ ಕೆಲವೊಮ್ಮೆ ಪರಿಣವ್ ತಾವು ಅಭಿನವ್ ಮೆಸ್ ಗೆ ಹೋಗಿ ಊಟ ಮಾಡಿದಾಗಲೂ ಯಾರೂ ಬೇಗ ಗುರುತಿಸುತ್ತಿರಲಿಲ್ಲ ಎನ್ನುತ್ತಾರೆ. ಆದರೆ ಅವರು ಸಮವಸ್ತ್ರ ಧರಿಸಿರುವಾಗ ಅವರ ಸಮವಸ್ತ್ರ ಹಾಗೂ ಕಾಲರ್ ಗಳ ಮೂಲಕ ಅವರನ್ನು ಸುಲಭವಾಗಿ ಗುರುತಿಸಬಹುದು ಎನ್ನುತ್ತಾರೆ ಇತರರು. ಶಾಲೆಯಲ್ಲಿ ಇದ್ದ ದಿನಗಳಲ್ಲಿ ಓದುವುದರಲ್ಲೂ ಇಬ್ಬರು ಬಹಳ ಚುರಕಾಗಿದ್ದರು ಎನ್ನುತ್ತಾರೆ ಅವರ ತಂದೆ ಅಶೋಕ್ ಪಾಠಕ್. ಏನೇ ಆದರೂ ಸಹೋದರರ ಈ ಸಾಧನೆ ನಿಜಕ್ಕೂ ಅಭಿನಂದನೀಯವಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here