ಕೆಲವು ವ್ಯಕ್ತಿಗಳು ಮಾತನಾಡುವುದಿಲ್ಲ, ಆದರೆ ಅವರು ಮಾಡುವ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಮಾಡುತ್ತಾರೆ. ಅಂತಹ ಸಾಧಕರಲ್ಲಿ ಒಬ್ಬರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಮೇಗೌಡರು. ಇವರು ತನ್ನ ಪರಿಶ್ರಮದಿಂದ 16 ಕೆರೆಗಳನ್ನು ನಿರ್ಮಿಸಿದ ಇವರ ಸಾಧನೆಯನ್ನು ಮೆಚ್ಚಿದ ಪ್ರಧಾ‌ನಿ ನರೇಂದ್ರ ಮೋದಿಯವರು ಇಂದು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ. ಅವರ ಪರಿಸರ ಕಾಳಜಿಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಕುರಿಗಾಹಿಯಾದ ಕಾಮೇಗೌಡರು ಶಾಲೆಯಲ್ಲಿ ಕಲಿತವರಲ್ಲ, ಆದರೆ ಪರಿಸರ ಕಾಳಜಿ ವಿದ್ಯಾವಂತರಿಗಿಂತ ಹೆಚ್ಚೇ ಇದೆ. 13 ವರ್ಷಗಳ ಹಿಂದೆ ಕುಂದೂರ ಬೆಟ್ಟಕ್ಕೆ ಕುರಿ ಮೇಯಿಸಲು ಹೋದಾಗ ನೀರು ಸಿಗದೆ ಪರದಾಡಿದ ಅವರು ಕಡೆಗೆ ಯಾರದೋ ಮನೆಯಲ್ಲಿ ನೀರು ಕೇಳಿ ಕುಡಿದರಾದರೂ, ತನ್ನಂತೆ ಬಾಯಾರಿದ ಮೂಕ ಪ್ರಾಣಿಗಳ ಗತಿ ಏನು? ಎಂದು ಆಲೋಚಿಸಿದರು. ಅವರು ಆಲೋಚಿಸಿ ಸುಮ್ಮನಾಗಲಿಲ್ಲ. ಬದಲಿಗೆ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು. ಜನ ಇವರ ಕೆಲಸ ನೋಡಿ ನಕ್ಕು ಗೇಲಿ ಮಾಡಿದರು. ಆದರೆ ಕಾಮೇಗೌಡರು ತಮ್ಮ ಕಾರ್ಯವನ್ನು ನಿಲ್ಲಿಸಲಿಲ್ಲ.

ಅವರ ಈ ಕಾರ್ಯದ ಪರಿಶ್ರಮದ ಫಲವಾಗಿ 16 ಕೆರೆಗಳ ನಿರ್ಮಾಣವಾಯಿತು. ಬೇಸಿಗೆಯಲ್ಲೂ ಜಾನುವಾರುಗಳ ಬಾಯಾರಿಕೆ ನೀಗಿಸುವ ತಾಣಗಳಾದವು. ದಕ್ಷಿಣ ಕರ್ನಾಟಕದ ಇತರೆ ಕಡೆಗಳಲ್ಲಿ ನೀರು ಕಡಿಮೆ ಆದರೂ, ಕಾಮೇಗೌಡರು ನಿರ್ಮಿಸಿದ ಕೆರೆಗಳಲ್ಲಿ ಮಾತ್ರ ನೀರು ಸದಾ ಇರುತ್ತದೆ.
ನೀರಿಗಾಗಿ ಪರಿತಪಿಸುವ ಪ್ರಾಣಿ ಪಕ್ಷಿಗಳ ಪರದಾಟ ಕಂಡು ಮರುಗಿದ ಇವರು ಮಾಡಿದ ಕೆಲಸ ನಿಜಕ್ಕೂ ಒಂದು ದೊಡ್ಡ ಸಾಧನೆಯೇ ಸರಿ. ಈ ಬಗ್ಗೆ ಸಂಸದ ಪಿಸಿ ಮೋಹನ್ ಅವರು ಟ್ವೀಟ್ ಮಾಡಿ ದಾಸನದೊಡ್ಡಿ ಕಾಮೇಗೌಡರ ಸಾಧನೆ ದೊಡ್ಡದು ಸಾಮಾನ್ಯ ರೈತನಾಗಿ ಅವರು ಪರಿಸರ ಕಾಳಜಿ ಮೆರೆದಿದ್ದಾರೆ ಎಂದು ಹೊಗಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಕೂಡಾ ಟ್ವೀಟ್ ಮಾಡಿ
ರಾಜ್ಯದ ಮಂಡ್ಯ ಜಿಲ್ಲೆಯ ಕಾಮೇಗೌಡರನ್ನು ತಮ್ಮ ಮನದ ಮಾತಿನಲ್ಲಿ ಉಲ್ಲೇಖಿಸಿದ ಪ್ರಧಾನಿ. ಕೆರೆಗಳನ್ನು ಕಟ್ಟಿ ಸಂರಕ್ಷಿಸುವ ಅವರ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಜೀ. “ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here