ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕರಡು ಮಸೂದೆ ಸಿದ್ಧವಾಗಿದ್ದು, ಇದೇ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಉದ್ದೇಶಿಸಿದೆ. ಫೆ. 17ರಂದು ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಫೆ.18ರಂದೇ ಈ ಮಸೂದೆ ಮಂಡಿಸಿ ಚರ್ಚೆಗೆ ಅವಕಾಶ ಕೊಡಲು ಸರ್ಕಾರ ನಿರ್ಧರಿಸಿದೆ.

ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಹು ವರ್ಷಗಳ ಬೇಡಿಕೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ವಿುಕ ಸಚಿವರಾಗಿದ್ದ ಸಂತೋಷ್ ಲಾಡ್ ಪ್ರಯತ್ನ ನಡೆಸಿದ್ದರು. ಆದರೆ ಇದರ ಅನುಷ್ಠಾನಕ್ಕೆ ತಾಂತ್ರಿಕ ಸಮಸ್ಯೆ ಉಂಟಾಯಿತು. ಕನ್ನಡಿಗರಿಗೆ ಉದ್ಯೋಗ ಮೀಸಲು ಕಾನೂನು ಮಾಡಿದರೆ ನ್ಯಾಯಾಲಯದಲ್ಲಿ ಮಾನ್ಯತೆ ಸಿಗದೆ ಹೋಗಬಹುದು. ಜತೆಗೆ ಉದ್ಯೋಗದಾತರಿಗೂ ಸಮಸ್ಯೆಯಾಗಲಿದೆ ಎಂಬ ಬಲವಾದ ಅಭಿಪ್ರಾಯ ಕೇಳಿ ಬಂತು. ಇದೀಗ ಕೆಲ ಪರಿಷ್ಕರಣೆಯೊಂದಿಗೆ ಕನ್ನಡಿಗರಿಗೆ ಶೇ. 75 ಉದ್ಯೋಗ ಕಲ್ಪಿಸುವ ಸಂಬಂಧ ಕಾರ್ವಿುಕ ಇಲಾಖೆ ಕರಡು ಮಸೂದೆ ರೂಪಿಸಿದೆ. ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಂಡಿರುವ ಮೀಸಲಾತಿ ಕಾಯ್ದೆ ಮಾದರಿಯನ್ನೇ ಕರ್ನಾಟಕದಲ್ಲೂ ಜಾರಿಗೆ ತರಲು ಕಾರ್ವಿುಕ ಇಲಾಖೆ ಒಲವು ತೋರಿದೆ.

ಕರಡು ಮಸೂದೆಯಲ್ಲಿ ಏನಿದೆ

ಯಾವುದೇ ಕಾರ್ಖಾನೆ, ಕೈಗಾರಿಕೆ, ಜಂಟಿ ಸಹಭಾಗಿತ್ವ (ಜಾಯಿಂಟ್ ವೆಂಚರ್), ಪಿಪಿಪಿ ಯೋಜನೆಗಳಲ್ಲಿ ಶೇ.75 ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು. ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ನೀಡಿದವರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು. ನುರಿತ, ಅರ್ಹ ಸ್ಥಳೀಯ ಅಭ್ಯರ್ಥಿ ಲಭ್ಯವಿರದಿದ್ದರೆ ಮೂರು ವರ್ಷದೊಳಗೆ ಕಾರ್ಖಾನೆ, ಕೈಗಾರಿಕೋದ್ಯಮಿಗಳು ಸ್ಥಳೀಯರಿಗೆ ತರಬೇತಿ ನೀಡಬೇಕು. ಒಂದು ವೇಳೆ ಅರ್ಹ ಅಭ್ಯರ್ಥಿಗಳು ಸಿಗದೇ ಹೋದಲ್ಲಿ ಕಾಯ್ದೆಯಿಂದ ವಿನಾಯಿತಿಗೆ ಅರ್ಜಿ ಹಾಕಬಹುದು ಎಂದು ಉಲ್ಲೇಖಿಸಲಾಗಿದೆ. ಕಾರ್ಖಾನೆ, ಕೈಗಾರಿಕೆ ಮಾಲೀಕರು ನೋಡಲ್ ಏಜೆನ್ಸಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳೀಯರ ನೇಮಕಾತಿ ವರದಿಯನ್ನು ಸಲ್ಲಿಸಬೇಕು. ನಿಯಮ ಪಾಲಿಸದ ಕೈಗಾರಿಕೆಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಯಾರು ಕನ್ನಡಿಗರು

ಭಾರತ ಸಂವಿಧಾನದ ಅನುಚ್ಛೇದ 39, 41, 43 ಮತ್ತು 47ರ ಉಪಬಂಧಗಳ ಪ್ರಕಾರ ರಾಜ್ಯದಲ್ಲಿನ ಪ್ರಜೆಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕಲ್ಪಿಸಲು ಕಾನೂನು ದಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಕಾರ್ವಿುಕ ಇಲಾಖೆ ಹೇಳಿಕೊಂಡಿದೆ. ರಾಜ್ಯದಲ್ಲಿ ಕನಿಷ್ಠ 15 ವರ್ಷ ವಾಸವಾಗಿರುವ ಅಥವಾ ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರುವವರಿಗೆ ಉದ್ಯೋಗ ಸೌಲಭ್ಯ ನೀಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಈ ವಿಧೇಯಕಕ್ಕೆ ಹಿನ್ನಡೆ ಆಗಬಾರದೆಂದು ಇಲಾಖೆಯು ಕಾನೂನು ಆಯೋಗ, ಕಾನೂನು ಇಲಾಖೆ, ಕಾನೂನು ಪಂಡಿತರ ನೆರವು ಪಡೆದಿದೆ. ಎದುರಾಗಬಹುದಾದ ಅಡೆತಡೆ ಬಗ್ಗೆ ಗಮನಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾನೂನಿನ ವ್ಯಾಪ್ತಿಗೊಳಪಡುವ ಎಲ್ಲರ ಜತೆ ಚರ್ಚೆ ಮಾಡಿ ಅಂತಿಮಗೊಳಿಸಿದ್ದೇವೆ. ಸಚಿವರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾರ್ವಿುಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here