ಮುಂಗಾರು ಮಳೆ ಉತ್ತಮವಾಗಿದ್ದು ರಾಜ್ಯದ ಜಲಾಶಯಗಳಿಗೆ ಒಳಹರಿವು ಬಂದರೆ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಕರ್ನಾಟಕಕ್ಕೆ ಆದೇಶ ನೀಡಿದೆ.ನವದೆಹಲಿಯಲ್ಲಿಂದು ಜಲಮಂಡಳಿ ಕಚೇರಿಯಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಕೇರಳ , ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷ, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಈ ಸೂಚನೆ ನೀಡಿದ್ದಾರೆ.ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಅವೈಜ್ಞಾನಿಕ ಎಂದು ಕರ್ನಾಟಕದ ಪ್ರತಿನಿಧಿಗಳು ವಾದಿಸಿದ್ದಾರೆ.

ಜೂನ್‌ ಅಂತ್ಯದೊಳಗೆ ಕರ್ನಾಟಕದಿಂದ ಹರಿಸಬೇಕಿರುವ ನಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡಿಸುವಂತೆ ತಮಿಳುನಾಡಿನ ಪ್ರತಿನಿಧಿಗಳು ತಮ್ಮ ವಾದ ಮಂಡಿಸಿದರು.ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಜೂನ್ ತಿಂಗಳಿನಲ್ಲಿ ಕರ್ನಾಟಕದ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ ನೀರು ಹರಿಸಬೇಕು. ಆದರೆ ಮುಂಗಾರು ಮಳೆ ಉತ್ತಮವಾಗಿದ್ದು ಒಳ ಹರಿವು ಬಂದರೆ ಮಾತ್ರ ಕರ್ನಾಟಕ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ ಎಂದು ಹುಸೇನ್ ಸಭೆ ಬಳಿಕ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇತ್ತ ಮಂಡ್ಯದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಇಂದು ನಡೆದ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ ಬೆನ್ನಲ್ಲೇ ಮಂಡ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಪಾಂಡವಪುರದಲ್ಲಿ ರೈತಸಂಘ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ. ತಕ್ಷಣ ನಾಲೆಗಳಿಗೆ ನೀರು ಬಿಡಬೇಕು. ತಮಿಳುನಾಡಿಗೆ ಯಾವ ಕಾರಣಕ್ಕೂ ನೀರು ಬಿಡಬಾರದು ಎಂದು ಆಗ್ರಹಿಸಿದೆ. ಕಾವೇರಿ ಹಿತರಕ್ಷಣಾ ಸಮಿತಿ ಈ ಆದೇಶವನ್ನು ವಿರೋಧಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here