ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿ ಆಗಿ ಹದಿಮೂರು ಬಾರಿ ಶಾಸಕರಾಗಿ ತಮಿಳುನಾಡಿನ ರಾಜಕೀಯದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಕರುಣಾನಿಧಿ ಅವರು ಇನ್ನು ನೆನಪು ಮಾತ್ರ. 94 ವರ್ಷ ವಯಸ್ಸಿನ ಕರುಣಾನಿಧಿ ಅವರು ನೆನ್ನೆ ಸಂಜೆ 6:10 ಸಮಯದಲ್ಲಿ ತಮಿಳುನಾಡಿನ ಕಾವೇರಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಮೂವರು ಹೆಂಡತಿಯರು ಹಾಗೂ ಆರು ಜನ ಮಕ್ಕಳ ಜೊತೆಗೆ ತನ್ನದೇ ಆದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಕರುಣಾನಿಧಿ ಅವರು ರಾಜಕೀಯ ಮಾತ್ರವಲ್ಲದೇ  ಸಿನಿಮಾರಂಗ ಹಾಗೂ ಸಾಹಿತ್ಯ ವಲಯದಲ್ಲಿ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಂತವರು. ನೇರ ನುಡಿಗಳಿಂದಲೇ ಮಡಿವಂತ ಸಮಾಜದ ಮೇಲೆ ದ್ವೇಷ ಕಟ್ಟಿಕೊಂಡಿದ್ದ ಕರುಣಾನಿಧಿ ಅವರಿಗೂ ಹಾಗು ನಮ್ಮ ಕರ್ನಾಟಕಕ್ಕೂ ವಿಶೇಷ ನಂಟು ಇತ್ತು.

ಹಾಗೆ ನೋಡಿದರೆ ಕಾವೇರಿ ವಿಷಯದಲ್ಲಿ ಎಂದಿಗೂ ತಮಿಳುನಾಡಿನ ರೈತರನ್ನು ಬಿಟ್ಟುಕೊಡದ ಕರುಣಾನಿಧಿ ಅವರಿಗೆ ಕರ್ನಾಟಕದ ಈ ಮೂವರು ವಿಶೇಷ ವ್ಯಕ್ತಿಗಳೆಂದರೆ ಬಹಳ ಗೌರವ. ಅದರಲ್ಲಿ ಕರ್ನಾಟಕದ ಶ್ರೇಷ್ಠ ಕವಿ ಸರ್ವಜ್ಞ ಅವರ ಪದಗಳಿಗೆ ಕರುಣಾನಿಧಿ ಅವರು ಮಾರುಹೋಗಿದ್ದರು. ಸರ್ವಜ್ಞ ಅವರ ವಚನಗಳನ್ನು ಕನ್ನಡದಿಂದ ತಮಿಳಿಗೆ ಭಾಷಾಂತರಿಸಿ ಸರ್ವಜ್ಞ ಅವರ ವಚನಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು‌. ಅಷ್ಟೇ ಅಲ್ಲ ಕರುಣಾನಿಧಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಚೆನೈನಲ್ಲಿ ಕರ್ನಾಟಕದ ಶ್ರೇಷ್ಠ ಕವಿ ಸರ್ವಜ್ಞ ಅವರ ಪುತ್ಥಳಿ ಸಹ ಸ್ಥಾಪಿಸಿ ಸರ್ವಜ್ಞ ಅವರ ನುಡಿಗಳಿಗೆ ಭಾಷೆಯ ಬೇಧವಿಲ್ಲ ಎಂದು ತೋರಿದ್ದರು.

ಕರುಣಾನಿಧಿ ಅವರು ಅತ್ಯಂತ ಪ್ರೀತಿಸುತ್ತಿದ್ದ ಕರ್ನಾಟಕದ ಎರಡನೇ ವ್ಯಕ್ತಿ ಅಂದರೆ ಅದು ಕರ್ನಾಟಕ ರತ್ನ ,ಕನ್ನಡಿಗರ ಆರಾಧ್ಯದೈವ ವರನಟ ಡಾ.ರಾಜ್‍ಕುಮಾರ್. ಡಾ.ರಾಜ್‍ಕುಮಾರ್ ಅವರೆಂದರೆ ಕರುಣಾನಿಧಿ ಅವರಿಗೆ ವಿಶೇಷವಾದ ಪ್ರೀತಿ.ಅಣ್ಣಾವ್ರ ಅದೆಷ್ಟೋ ಸಿನಿಮಾಗಳ ಚಿತ್ರೀಕರಣ ಚೆನೈನಲ್ಲಿ ನಡೆಯುತ್ತಿದ್ದಾಗ ಅಣ್ಣಾವ್ರನ್ನು ಮನೆಗೆ ಕರೆಸ ಸತ್ಕರಿಸಿ ನಿಮ್ಮ ಅಭಿನಯ ಹಾಗು ವ್ಯಕ್ತಿತ್ವಕ್ಕೆ ನಾನು ಅಭಿಮಾನಿ ಎಂದು ಅಷ್ಣಾವ್ರ ಬಳಿ ಕರುಣಾನಿಧಿ ಹೇಳಿದ್ದರು.ಅಷ್ಟೇ ಅಲ್ಲ ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಅಪಹರಿಸಿದ್ದಾಗ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಅವರು ಅಣ್ಣಾವ್ರನ್ನು ಬಿಡುಗಡೆ ಗೊಳಿಸಲು ಸಾಕಷ್ಟು ಶ್ರಮಿಸಿದ್ದರು.ಅಣ್ಣಾವ್ರು ಕಾಡಿನಿಂದ ಮರಳಿ ಬಂದ ನಂತರ ಕರುಣಾನಿಧಿ ಅವರ ಮನೆಗೆ ತೆರಳಿ ಅಭಿನಂದನೆ ಸಹ ಸಲ್ಲಿಸಿದ್ದರು‌.

ಇನ್ನು ಕರುಣಾನಿಧಿ ಅವರು ಅತ್ಯಂತ ಆತ್ಮೀಯವಾಗಿದ್ದ  ಮೂರನೇ ಕನ್ನಡಿಗ ಎಂದರೆ ನಮ್ಮ ದೇಶದ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು. ದೇವೇಗೌಡರಿಗೂ ಕರುಣಾನಿಧಿ ಅವರಿಗೂ ಅಪಾರವಾದ ಸ್ಬೇಹವಿತ್ತು‌. ದೇಶದಲ್ಲ ತೃತೀಯ ರಂಗ ಅಧಿಕಾರಕ್ಕೆ ವರುವ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಎಲ್ಲರು ಗೊಂದಲದಲ್ಲಿದ್ದಾಗ ದೇವೇಗೌಡರು ಪ್ರಧಾನಮಂತ್ರಿ ಆಗಬೇಕು ಎಂದು ಮೊದಲಿಗೆ ಹೆಸರು ಸೂಚಿಸಿದ್ದೇ ಕರುಣಾನಿಧಿ. ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಲು ಕರುಣಾನಿಧಿ ಅವರು ಸಾಕಷ್ಟು ಶ್ರಮಿಸಿದ್ದರು.ಹೀಗೆ ಕನ್ನಡ ನಾಡಿನ ಈ ವಿಶೇಷ ವ್ಯಕ್ತಿಗಳ ಬಗ್ಗೆ ಕರುಣಾನಿಧಿ ಅವರಿಗೆ ವಿಶೇಷ ಪ್ರೀತಿಯಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here