370 ನೇ ವಿಧಿಯ ರದ್ದು ಒಂದು ಐತಿಹಾಸಿಕ ನಿರ್ಧಾರ ಎಂಬುದಾಗಿ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ‌ಹಿಂದಕ್ಕೆ ಪಡೆದಿದ್ದಕ್ಕೆ ಇಡೀ ದೇಶವೇ ಸಂಭ್ರಮಪಟ್ಟರೂ ಕಾಂಗ್ರೆಸ್ ಅದನ್ನು ಒಪ್ಪಲಿಲ್ಲ. ಅಲ್ಲದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದೆ, ಅಲ್ಲಿನ ಜನ ಜೀವನ ಸಾಮಾನ್ಯವಾಗಿಲ್ಲ, ಜನರು ಭಯದಿಂದ ಬದುಕುವಂತಾಗಿದೆ ಎಂದೆಲ್ಲಾ ಹೇಳಿಕೆಗಳನ್ನು ನೀಡಿದ್ದು ಸುದ್ದಿಯಾಗಿತ್ತು. ಆದರೆ ಆಡಳಿತ ‌ಪಕ್ಷ ಬಿಜೆಪಿ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿತ್ತು. ಇನ್ನು ಕಣಿವೆ ರಾಜ್ಯದ ಜನರ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿನ ಜನಜೀವನ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಆದರೆ ಈಗ ಅಲ್ಲಿಗೆ ವಾಸ್ತವ ಅಧ್ಯಯನ ಮಾಡುವುದಾಗಿ ಕಾಂಗ್ರೆಸ್ ನ ನಿಯೋಗ ಒಂದು ಕಣಿವೆ ರಾಜ್ಯಕ್ಕೆ ಭೇಟಿ ನೀಡಲು ಸಿದ್ಧವಾಗಿ ನಿಂತಿದೆ. ಶಾಂತಿ ನೆಲೆಗೊಳ್ಳುತ್ತಿರುವ ಈ ಹಂತದಲ್ಲಿ ಇಲ್ಲಿಗೆ ಬಂದು ಶಾಂತಿಯನ್ನು ಕದಡಬೇಡಿ ಎಂದು ಕಾಂಗ್ರೆಸ್​ನ ರಾಹುಲ್​ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗಕ್ಕೆ ಕಾಶ್ಮೀರದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ ಅದಕ್ಕೆ ಹೊರತಾಗಿಯೂ ಅಲ್ಲಿಗೆ ಭೇಟಿ ನೀಡಿಯೇ ತೀರುತ್ತೇವೆಂದು ರಾಹುಲ್​ ಗಾಂಧಿ ಹಾಗೂ ಮತ್ತಿತರ ಪ್ರತಿಪಕ್ಷಗಳ ನಾಯಕರು ಕಣಿವೆಗೆ ಹೊರಡಲು ಅನುವಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ರಾಜಕಾರಣಕ್ಕೆ ಅವಕಾಶ ನೀಡಬಾರದೆಂದು ಕೇಂದ್ರವು ಕಣಿವೆಗೆ ಭೇಟಿ ನೀಡಲು ಯಾವೊಬ್ಬ ರಾಜಕೀಯ ನಾಯಕರಿಗೂ ಅವಕಾಶ ನೀಡಿರಲಿಲ್ಲ.‌

ಅಲ್ಲದೆ ಕಾಶ್ಮೀರದ ಪ್ರಾದೇಶಿಕ ಪಕ್ಷಗಳ ನಾಯಕರಾದ ಹಾಗೂ ಮಾಜಿ ಸಿಎಂಗಳಾದ ಫಾರೂಕ್​ ಅಬ್ದುಲ್ಲಾ, ಓಮರ್​ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಿದ್ದು, ಕಣಿವೆಯಲ್ಲಿ ಯಾವುದೇ ಹಿಂಸೆ, ಪ್ರತಿಭಟನೆ ನಡೆಯದಂತೆ‌ ಕೇಂದ್ರ ಸರ್ಕಾರ ಗಮನಹರಿಸಿದೆ. ಮೊಬೈಲ್​ಫೋನ್​ ಸಂಪರ್ಕ, ಇಂಟರ್​ನೆಟ್​ ಸಂಪರ್ಕ ಮತ್ತು ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿದೆ. ಇದರ ಹೊರತಾಗಿಯೂ ಶುಕ್ರವಾರ ಮಾತ್ರ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ಮಸೀದಿಗಳಿಗೆ ತೆರಳಿದ ಜನರು ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲವೆನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here