ಕೋಮಲ್ ಗಣಾತ್ರ ಇದು ಒಬ್ಬ ಮಹಿಳೆಯ ಹೆಸರಾದರೂ, ಈ ಹೆಸರು ಅದೆಷ್ಟೋ ಮಹಿಳೆಯರಿಗೆ, ವಿಶೇಷವಾಗಿ ವರದಕ್ಷಿಣೆ ಪಿಡುಗಿನಿಂದ ನಲುಗಿ, ಗಂಡನ ಮನೆ ತೊರೆದು ಜೀವನದ ಬಗ್ಗೆ ನಿರಾಶರಾದವರಿಗೆ ಕೋಮಲ್ ಗಣಾತ್ರ ಅವರ ಜೀವನ ಒಂದು ಸ್ಪೂರ್ತಿ ಹಾಗೂ ಪ್ರೇರಣೆ ಎಂದರೆ ತಪ್ಪಾಗಲಾರದು. ಕೋಮಲ್ ಗಣಾತ್ರ ಅವರಿಗೆ 26ನೇ ವಯಸ್ಸಿನಲ್ಲಿ ಮದುವೆಯಾಯಿತು. ನ್ಯೂಜಿಲೆಂಡ್ ನ ಎನ್.ಆರ್.ಐ. ಒಬ್ಬರಿಗೆ ಆಕೆಯನ್ನು ಮದುವೆ ಮಾಡಿಕೊಡಲಾಗಿತ್ತು. ಗಂಡನ ಮನೆಗೆ ಹೋದ ಆಕೆಗೆ ಅಲ್ಲಿ ವರದಕ್ಷಿಣೆ ಸಮಸ್ಯೆ ಎದುರಾಯಿತು. ಅದನ್ನು ವಿರೋಧಿಸಿದ ಕೋಮಲ್ ಅವರ ಪತಿ ಮದುವೆಯ ಎರಡು ವಾರದ ನಂತರ ಹೆಂಡತಿಯನ್ನು ಬಿಟ್ಟು, ನ್ಯೂಜಿಲೆಂಡ್ ಗೆ ಹೊರಟವರು, ಮತ್ತೆ ಬರಲೇ ಇಲ್ಲ.

ಕೋಮಲ್ ತಮ್ಮ ತವರು ಮನೆಗೆ ಬಂದರು.ಗಂಡನ ಬಗ್ಗೆ ತಿಳಿಯಲು ಪೋಲಿಸ್ ಮೊರೆ ಹೋದರು, ನ್ಯೂಜಿಲೆಂಡ್ ನ ಗವರ್ನರ್ ಗೆ ಪತ್ರ ಬರೆದರೂ ವ್ಯರ್ಥವಾಯಿತು‌. ಕಡೆಗೆ ದೂರದ ಗ್ರಾಮವೊಂದರಲ್ಲಿ ಐದು ಸಾವಿರ ಸಂಬಳಕ್ಕೆ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ಆದರೆ ಮದುವೆಗೆ ಮುಂಚೆ ಯುಪಿಎಸ್ಸಿ ಪರೀಕ್ಷೆ ಎದುರಿಸಬೇಕೆಂದು ಇದ್ದ ಗುರಿಯ ಕಡೆ ಗಮನ ಹರಿಸಿದರು. ಗ್ರಾಮದಲ್ಲಿ ಆಧುನಿಕ ಸೌಕರ್ಯಗಳ ಕೊರತೆಯಿದ್ದರೂ ಅವು ಆಕೆಯ ಅಧ್ಯಯನ ಶೀಲತೆಗೆ ತಡೆಯಾಗಲಿಲ್ಲ. ಓದಿದ್ದು ಗುಜರಾತಿ ಮೀಡಿಯಂ ಆದರೂ , ಶ್ರಮವಹಿಸಿ ಓದಿದರು. ದೂರದ ಮುಂಬೈಗೆ ಬಂದು ಪರೀಕ್ಷೆ ಎದುರಿಸಿದರು.

ಮೂರು ಬಾರಿ ಯುಪಿಎಸ್ಸಿ, ಸಿಎಸ್ಇ ಪರೀಕ್ಷೆ ಎದುರಿಸಿದ ಅವರು , 2012 ರಲ್ಲಿ ಐಎಎಸ್ ನಲ್ಲಿ 591 ನೇ ರ್ಯಾಂಕ್ ಪಡೆದ ಗುಜರಾತಿನ ಒಬ್ಬರೇ ಮಹಿಳೆಯಾದರು. ಪ್ರಸ್ತುತ ಅವರು ರಕ್ಷಣಾ ಸಚಿವಾಲಯದಲ್ಲಿ ಅಧಿಕಾರಿಯಾಗಿದ್ದಾರೆ. ಕೋಮಲ್
ಗಣಾತ್ರ ಅವರ ಜೀವನ ಯುಪಿಎಸ್ಸಿ, ಐಎಎಸ್ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅದೆಷ್ಟೋ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಒಂದು ಸ್ಪೂರ್ತಿಯ ಹಾಗೂ ನವ ಚೈತನ್ಯ ನೀಡುವ ಕಥೆ ಎಂಬುದರಲ್ಲಿ ಎರಡು ಮಾತಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here