ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಯಾದಗರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಚಂಡ್ರಕಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.ಮುಖ್ಯಮಂತ್ರಿಗಳು ರಾತ್ರಿ ಮಲುಗುವುದಕ್ಕೂ ಮುನ್ನ ಸಚಿವರು ಹಾಗೂ ಶಾಸಕರೊಂದಿಗೆ ಕುಶಲೊಪರಿ ಮಾತುಕತೆಯಲ್ಲಿ ತೊಡಗಿದರು.ಈ ಸಂದರ್ಭದಲ್ಲಿ ಸಚಿವರುಗಳಾದ ರಾಜಶೇಖರ ಪಾಟೀಲ,ಬಂಡೆಪ್ಪ ಖಾಶಂಪೂರ, ವೆಂಕಟರಾವ ನಾಡಗೌಡ, ಸಾ.ರಾ. ಮಹೇಶ, ಶಾಸಕ ನಾಗನಗೌಡ ಕಂದಕೂರ ಜೊತೆಗಿದ್ದರು.ಈ  ಮೂಲಕ ಈ ಬಾರಿಯ ಮೊದಲ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನಡೆದಿದೆ. ಗ್ರಾಮ ವಾಸ್ತವ್ಯಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಜನಬೆಂಬಲ ದೊರೆತಿದ್ದು ಸತತವಾಗಿ ಹತ್ತು ತಾಸುಗಳ ಕಾಲ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಅಷ್ಟೇ ಅಲ್ಲದೇ ಎಲ್ಲರ ಅರ್ಜಿಗಳನ್ನು ಪರಿಶೀಲನೆ ಮಾಡಿ ಅವಶ್ಯಕತೆಗಳನ್ನು ಪೂರೈಸಲು ಅಧಿಕಾರಿಗಳಿಗೆ ಸೂಚನೆ ಮಾಡಿದರು.ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ, ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ, ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು.ಈ ಮಧ್ಯೆ ವೇದಿಕೆಯ ಮುಂಭಾಗದಲ್ಲಿ ವಿಕಲಚೇತನರು ಜಮಾವಣೆಯಾಗಿದ್ದನ್ನು ಗಮನಿಸಿದ ಮುಖ್ಯಮಂತ್ರಿಗಳು, ವಿಕಲಚೇತನರು ತೊಂದರೆಪಟ್ಟುಕೊಂಡು ಮುಖ್ಯವೇದಿಕೆಗೆ ಬರುವುದು ಬೇಡ, ಸ್ವತಃ ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ವಿಕಲಚೇತನರ ಬಳಿ ತೆರಳಿ ಅವರ ಮನವಿಗಳನ್ನು ಪಡೆದು, ಅಹವಾಲುಗಳನ್ನು ಸ್ವೀಕರಿಸಿದರು.

ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 1 ಸಾವಿರ ಕೋಟಿ ರೂ.ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ  ಗುರುಮಠಕಲ್ ಕ್ಷೇತ್ರದ ಚಂಡ್ರಕಿಯಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ, ಗುರುಮಠಕಲ್ ಕ್ಷೇತ್ರದಲ್ಲಿ 3197 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸುಮಾರು 20 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ 2006 ರಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ.ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು.
ಚಂಡ್ರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ ಎಂದರು.

ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಪಶುವೈದ್ಯಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲೆಯಲ್ಲಿ 300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಮಂಜೂರಾತಿಗೆ ಇಂದು ಆದೇಶ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕದ ಗುಣಮಟ್ಟ ಸುಧಾರಣೆ, ಆಸ್ಪತ್ರೆ ತಲುಪಲು ಅಗತ್ಯವಿರುವ ಸಂಪರ್ಕ ರಸ್ತೆ ನಿರ್ಮಿಸಲಾಗುವುದು.

ಸಾಲಮನ್ನಾ ಯೋಜನೆಯಡಿ 302 ಕೋಟಿ ರೂ.ಗಳನ್ನು ಸಹಕಾರ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. ಸುಮಾರು 75 ಸಾವಿರ ರೈತರಿಗೆ ಈಗಾಗಲೇ ಸೌಲಭ್ಯ ದೊರೆತಿದೆ. ಹೊಸ ಸಾಲಗಳ ಬಿಡುಗಡೆಗೆ ಸಹಕಾರ ಬ್ಯಾಂಕುಗಳಿಗೆ 100 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಗಣಿ,ಭೂವಿಜ್ಞಾನ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಮಾತನಾಡಿದರು.ಇದೇ ಸಂದರ್ಭದಲ್ಲಿ ಚಂಡ್ರಕಿ ಗ್ರಾಮದ ಹಲವಾರು ರೈತರಿಗೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಶಾಸಕ ಶರಣಬಸಪ್ಪ ದರ್ಶನಾಪೂರ, ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಹೆಚ್.ಕೋನರಡ್ಡಿ ಮತ್ತಿತರರು ಇದ್ದರು.ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ವಾಗತಿಸಿದರು.ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ವಂದಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here