ಬೆಳೆಗಾರರ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಕನ್ನಡ ಭಾಷೆ ಮೇಲಿನ ಪ್ರೀತಿ ತೋರಿಸಿ ಗಮನ ಸೆಳೆದರು.
ಕಳೆದ ಎರಡು ದಿನಗಳಿಂದ ಕಬ್ಬು ಬೆಳೆಗಾರರ ತೀವ್ರ ಆಕ್ರೋಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಗುರಿಯಾಗಿದ್ದರು. ಈ ಹಿನ್ನಲೆಯಲ್ಲಿ ನಿನ್ನೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಸಭೆ ನಡೆಸಿದರು. ಸಭೆ ವೇಳೆ ಸಕ್ಕರೆ ಕಾರ್ಖಾನೆ ಮಾಲಿಕರ ಸಂಘದ ಅಧ್ಯಕ್ಷ ವಿಜಯ್​ ರೆಡ್ಡಿಯವರನ್ನು ರೈತರಿಗೆ ಕೊಡಲು ಎಷ್ಟು ಹಣ ಬಾಕಿ ಉಳಿಸಿಕೊಂಡಿದ್ದೀರಿ ಮತ್ತು ಕಾರಣವೇನು ಎಂದು ಕೇಳಿದರು. ಅದಕ್ಕೆ ವಿಜಯ್​ ರೆಡ್ಡಿ ಆಂಗ್ಲ ಭಾಷೆಯಲ್ಲಿ ಉತ್ತರಿಸಲು ನೋಡಿದರು.

ಇದರಿಂದ ಸಿಟ್ಟಿಗೆದ್ದ ಸಿಎಂ, ಕನ್ನಡದಲ್ಲಿ ಮಾತನಾಡಿ, ಇಂಗ್ಲೀಷ್​ನಲ್ಲಿ ಯಾಕೆ ಮಾತನಾಡುತ್ತಿದ್ದೀರಿ ಎಂದರು.
ಮೂಲಗಳ ಪ್ರಕಾರ, ವಿಜಯ್​ ರೆಡ್ಡಿ ತಮಗೆ ಕನ್ನಡ ಬರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದಾಗ ಕುಮಾರಸ್ವಾಮಿ ಇನ್ನಷ್ಟು ಕೋಪಗೊಂಡು, ಕನ್ನಡದಲ್ಲಿ ಮಾತನಾಡುವುದನ್ನು ಮೊದಲು ಕಲಿಯಿರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಜತೆಗೆ ಹೊರ ರಾಜ್ಯದವರನ್ನು ಕರ್ನಾಟಕ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರನ್ನಾಗಿ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು ಎಂದು ತಿಳಿದುಬಂದಿದೆ.

ಸಕ್ಕರೆ ಕಾರ್ಖಾನೆ ಮಾಲೀಕರು ಸಮ್ಮತಿಸಿದ ದರದಲ್ಲಿ ರೈತರಿಗೆ ಬಾಕಿ ಪಾವತಿಸುವ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.
ಇದಲ್ಲದೆ ಮುಂದಿನ ದಿನಗಳಲ್ಲಿ ರೈತರಿಗೆ ಕಾರ್ಖಾನೆಗಳಿಂದ ತೂಕ, ಇಳುವರಿ ಪ್ರಮಾಣ, ಕಟಾವು ಮತ್ತು ಸಾರಿಗೆ ವೆಚ್ಚ ಮೊದಲಾದ ವಿಚಾರಗಳಲ್ಲಿ ಮೋಸವಾಗದಂತೆ ತಡೆಯಲು ಸರ್ಕಾರ ಕೆಲವು ನಿಯಮಾವಳಿಗಳನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಇಂದು ನಡೆದ ಸಭೆಯಲ್ಲಿ ರೈತರು ಮನವಿಯಲ್ಲಿ ಸಲ್ಲಿಸಿದ 13 ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

2018-19ರ ಹಂಗಾಮಿನಲ್ಲಿ ಎಫ್ ಆರ್ ಪಿ ದರದಲ್ಲಿ ಸಕ್ಕರೆ ಕಾರ್ಖಾನೆಗಳು 15 ದಿನಗಳೊಳಗಾಗಿ ಒಂದೇ ಹಂತದಲ್ಲಿ ಹಣ ಪಾವತಿಸಲು ಸೂಚನೆ ನೀಡಲಾಗಿದೆ.ಸಭೆಯಲ್ಲಿ ರೈತರು ಮನವಿ ಮಾಡಿದಂತೆ ಎಫ್ ಆರ್ ಪಿ ದರವನ್ನು ex-field ನಿಗದಿಪಡಿಸುವ ಬಗ್ಗೆ ಪರಿಶೀಲಿಸಲು ಸಕ್ಕರೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ರೈತರು ಯಾವ ಸಮಸ್ಯೆಯಿದ್ದರೂ ನನ್ನೊಂದಿಗೆ ನೇರವಾಗಿ ಚರ್ಚಿಸುವಂತೆ ಕೋರಿದ್ದೇನೆ. ರೈತರು ಯಾವ ಕಾರಣಕ್ಕೂ ಕಳವಳಕ್ಕೆ ಒಳಗಾಗಬಾರದು.

ಸರ್ಕಾರ ರೈತರ ಪರವಾಗಿದೆ ಎಂದು ತಿಳಿಸಿದರು.ಇಂದಿನ ಸಭೆಯಲ್ಲಿ ಪರಸ್ಪರ ವಿಶ್ವಾಸದಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ರೈತರ ಬೇಡಿಕೆಯಂತೆ ಗುಜರಾತ್, ಮಹಾರಾಷ್ಟ್ರ ಮಾದರಿಗಳ ಮಾಹಿತಿಯನ್ನು ತರಿಸುವಂತೆಯೂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ.
ಮುಂದಿನ ವರ್ಷ ರೈತರು ಇಂತಹ ಯಾವುದೇ ಸಮಸ್ಯೆಗೊಳಗಾಗಿ ಪ್ರತಿಭಟನೆ ನಡೆಸುವ ಸಂದರ್ಭ ಬಾರದಂತೆ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.ಕಳೆದ 7-8 ವರ್ಷ ಹೋರಾಟಗಾರರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here