ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಮ್ಮ ಮೊದಲ ರಾಜಕೀಯ ಶತ್ರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಕುಮಾರಸ್ವಾಮಿಯವರು, ನಾನು ಸಿಎಂ ಆಗಿದ್ದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಆಪ್ತ ಶಾಸಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡಿಕೊಂಡು ಬಂದಿದ್ದರು.ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಟೀಕಾ ಪ್ರಹಾರ ನಡೆಸಿದರು. ಮೈತ್ರಿ ಸರ್ಕಾರ ಮುಂದುವರೆಯಬೇಕೆಂಬುದು ಕಾಂಗ್ರೆಸ್‍ನ ಹೈಕಮಾಂಡ್‍ತೀರ್ಮಾನವಾಗಿತ್ತು.

ಆದರೆ ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಸಿಎಂ ಆಗಿ ನಾನು ಕೈಗೊಂಡ ಕೆಲವು ತೀರ್ಮಾನಗಳನ್ನು ಸಹಿಸಿಕೊಳ್ಳದೆ ಸರ್ಕಾರದ ಪತನಕ್ಕೆ ನಿರಂತರ ಪ್ರಯತ್ನ ಮಾಡಿದ್ದರು.ಫೋನ್ ಟಾಪಿಂಗ್‍ಪ್ರಕರಣ ಸಿಬಿಐ ತನಿಖೆಗೆ ವಹಿಸಿರುವುದು ಕೂಡ ಸಿದ್ದರಾಮಯ್ಯನವರ ಕರಾಮತ್ತೇ ಕಾರಣ. ಅತೃಪ್ತ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಾಗಿದ್ದರೂ ಅದಕ್ಕೆ ಅವಕಾಶ ನೀಡಲಿಲ್ಲ. ನಾನು ಸಿಎಂ ಕುರ್ಚಿಯಲ್ಲಿ ಕೂರುವುದನ್ನು ಸಹಿಸದ ಸಿದ್ದರಾಮಯ್ಯ ಸರ್ಕಾರದ ಪತನದ ರೂವಾರಿ ಎಂದು ಗಂಭೀರ ಆರೋಪ ಮಾಡಿದರು.
ತಮ್ಮ ಬೆಂಬಲಿಗರನ್ನು ಛೂ ಬಿಡುವ ಮೂಲಕ ಬಂಡಾಯಕ್ಕೆ ನಾಂದಿ ಹಾಡಿದ್ದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದರು.

ಶಾಸಕರನ್ನು ವಿಶೇಷ ವಿಮಾನದಲ್ಲಿ ಕಳುಹಿಸುವ ಮೂಲಕ ಸರ್ಕಾರ ಪತನಕ್ಕೆ ಕಾರಣರಾದ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡಲಿಲ್ಲ.ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿರಲಿಲ್ಲ, ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ನಾನು ಸಿಎಂ ಆಗುವುದೇ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಹಂತ ಹಂತವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದರು. ಮತ್ತೆ ಸಿಎಂ ಆಗಬೇಕೆಂಬ ಹುನ್ನಾರ ನಡೆಸಿದ್ದರು. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸರ್ಕಾರ ಪತನಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here