ಲಾಕ್ ಡೌನ್ ಆದ ನಂತರ ಎಲ್ಲಾ ಶಾಲೆ ಕಾಲೇಜುಗಳು ಬಂದ್ ಆಗಿವೆ‌. ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನು ಯಾವುದೇ ರೀತಿಯ ನಿರ್ಧಾರಗಳನ್ನು ಮಾಡಿಲ್ಲ. ಶಾಲೆ ಕಾಲೇಜುಗಳು ಮುಚ್ಚಿರುವ ಕಾರಣ ಖಾಸಗಿ ಶಾಲಾ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದು, ಸರ್ಕಾರ ಅಥವಾ ಶಾಲಾ ಆಡಳಿತ ಮಂಡಳಿಗಳಿಂದ ಯಾವುದೇ ನೆರವು ಸಿಗದೆ ಅನೇಕ ಶಿಕ್ಷಕರು ಸೆಕ್ಯುರಿಟಿ ಗಾರ್ಡ್ ಗಳಾಗಿ, ರಸ್ತೆ ಬದಿಯಲ್ಲಿ ಹಣ್ಣು ತರಕಾರಿ ಮಾರುವ ಉದ್ಯೋಗಗಳ ಕಡೆ ಮುಖ ಮಾಡಿದ್ದಾರೆ. ಈ ಕುರಿತಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಉಪನ್ಯಾಸಕರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ಸಂಕಷ್ಟಗಳ ಪರಿಹಾರಕ್ಕಾಗಿ ಸರ್ಕಾರ ಮುಂದೆ ಬರಬೇಕು ಎಂದು ಕುಮಾರಸ್ವಾಮಿಯವರಯ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ಕೊರೋನಾ ಸಂಕಷ್ಟ ಕಾಲದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು.

ರಾಜ್ಯದಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳ ಶಿಕ್ಷಕರಿಗೆ ಕಳೆದ ಏಪ್ರಿಲ್ ನಿಂದ ವೇತನ ಸಿಗದೇ ದೈನಂದಿನ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರ ನೋವು ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರ ಈ ಬಗ್ಗೆ ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅತಂತ್ರಕ್ಕೆ ಸಿಲುಕಿರುವ ಶಿಕ್ಷಕರ ನೆರವಿಗೆ ತಕ್ಷಣ ಧಾವಿಸಬೇಕು. ಕೆಲ ಖಾಸಗಿ ಶಾಲೆಗಳಲ್ಲಿ ಶೇಕಡ ಐವತ್ತಕ್ಕಿಂತಲೂ ಕಡಿಮೆ ವೇತನ ನೀಡುತ್ತಿದ್ದರೂ ಸಕಾಲಕ್ಕೆ ಪಾವತಿಸುತ್ತಿಲ್ಲ. ಬೇರೆ ಉದ್ಯೋಗ ಗೊತ್ತಿಲ್ಲದ ಲಕ್ಷಾಂತರ ಖಾಸಗಿ ಶಿಕ್ಷಕ ಸಮುದಾಯ ಮನೆ ಬಾಡಿಗೆ ಕಟ್ಟಲೂ ಆಗದೆ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರ ವಿಶೇಷ ಆರ್ಥಿಕ ನೆರವು ಮತ್ತು ಸಾಲ ಸೌಲಭ್ಯ ಒದಗಿಸಬೇಕು.

ವಿದ್ಯಾರ್ಥಿಗಳು ಶುಲ್ಕ ಕಟ್ಟುತ್ತಿಲ್ಲ ಎಂಬ ಕಾರಣ ಹೇಳಿ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ಆಡಳಿತ ಮಂಡಳಿಗಳು ಮುಂದಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ತಡಮಾಡದೆ ತಕ್ಷಣ ಮಧ್ಯಪ್ರವೇಶಿಸಬೇಕು.
ಎಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here