ಹಲ್ಲಿಗಳೆಂದರೆ ಮೊದಲಿನಿಂದಲೂ ನಮ್ಮಲ್ಲಿ ಅನೇಕರಿಗೆ ಭಯ, ಆತಂಕಗಳು ಇದ್ದೇ ಇದೆ. ಬಹುಶಃ ಹಲ್ಲಿಗಳ ಬಗೆಗೆ ಹರಡಿರುವ ನಂಬಿಕೆಗಳು ಇದಕ್ಕೆ ಕಾರಣವಿರಬಹುದು. ಆದರೆ ಈ ವಿಶೇಷ ಜೀವಿಗಳು ನಮ್ಮ ಜೀವನದಲ್ಲಿ ಒಂದು ರೀತಿಯಲ್ಲಿ ಸಂವಹನ ಮಾದ್ಯಮಗಳಾಗಿವೆ. ಅಲ್ಲದೇ ಇವುಗಳ ಜೊತೆಗೆ ಕೆಲವು ನಂಬಿಕೆಗಳು ಕೂಡಾ ಸೇರಿ ಮತ್ತಷ್ಟು ರೋಚಕ, ಆಸಕ್ತಿಕರ ಹಾಗೂ ಭಯದ ನೆರಳನ್ನು ಜೊತೆಗೂಡಿಸಿಕೊಂಡು ನಮ್ಮ ಗಮನ ತಮ್ಮತ್ತ ಸೆಳೆಯುತ್ತವೆ.

ಹಲ್ಲಿ ನಮ್ಮ ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ , ಯಾವುದೋ ಒಂದು ರೀತಿಯ ಫಲವಿದೆಯೆಂದು, ಬಹು ಸಮಯಗಳಲ್ಲಿ ಅದು ದೋಷವೆಂದು ಪರಿಗಣಿಸಲಾಗುತ್ತದೆ. ಆದರೆ ಇದರ ಹೊರತಾಗಿ ನಮಗೆ ತಿಳಿಯದ ಇನ್ನೊಂದು ರೋಚಕ ವಿಷಯವೂ ಇದ್ದು, ಅದು ಬಹಳಷ್ಟು ಜನರಿಗೇ ತಿಳಿದೇ ಇಲ್ಲ.

ಸಾಮಾನ್ಯವಾಗಿ ಹಲ್ಲಿಗಳು ಮನೆಯ ಒಳಗೆ , ಗೋಡೆಗಳ ಮೇಲಿನ ಕತ್ತಲಿರುವ ಮೂಲೆಗಳಲ್ಲಿ ಕಂಡು ಬರುತ್ತವೆ. ಅದನ್ನು ನಾವು ನೋಡಿದ್ದೇವೆ. ಅಲ್ಲದೆ ಎಲ್ಲಿ ನಮ್ಮ ಮೇಲೆ ಬಿದ್ದು ದೋಷಕ್ಕೆ ಕಾರಣವಾಗುತ್ತದೆ ಎಂದು ನಾವು ಅವುಗಳನ್ನು ಓಡಿಸುವುದೂ ಉಂಟು. ಆದರೆ ಈಗ ಹೇಳುವ ವಿಷಯ ಕೇಳಿದ ನಂತರ ಇನ್ನು ಮುಂದೆ ಹಲ್ಲಿಗಳ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು.

ಕೆಲವು ನಂಬಿಕೆಗಳ ಪ್ರಕಾರ ಹಲ್ಲಿಗಳನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಅವು ತಾವು ಇರುವ ಕಡೆಯಿಂದ ಸ್ಥಾನ ಬದಲಿಸಿ ಮನೆಯಲ್ಲಿ ನಿತ್ಯ ದೇವರನ್ನು ಪೂಜಿಸುವ ಸ್ಥಳಗಳಿಗೇನಾದರೂ ಬಂದರೆ ಅದನ್ನು ಶುಭ ಸೂಚನೆಯೆಂದು ಗ್ರಹಿಸಲಾಗುತ್ತದೆ. ಅದೂ ಅಲ್ಲದೆ ಹಲ್ಲಿಯೇನಾದರೂ ದೇವರ ಕೋಣೆಯ

ಮೂಲೆಯಲ್ಲಿ ಸದಾ ಇರತೊಡಗಿದರೆ, ಹಾಗೂ ಪೂಜಾ ಸಮಯದಲ್ಲಿ ಧೈರ್ಯವಾಗಿ ಪೂಜೆ ಮಾಡುವವರ ಬಳಿ ಓಡಾಡಿದರೆ ಆ ಮನೆಗೆ ದೈವ ರಕ್ಷಣೆಯಿದೆಯೆಂಬುದು ಕೂಡಾ ಒಂದು ನಂಬಿಕೆಯಾಗಿದ್ದು,ಈ ವಿಷಯದ ಬಗ್ಗೆ ತಿಳಿದವರು ಬೆರಳಿಣಕೆಯಷ್ಟು ಜನರಷ್ಟೆ.ಇನ್ನು ಹಲ್ಲಿಯೇನಾದರೂ ನಮ್ಮ ಮೇಲೆ‌ ಬಿದ್ದರೆ ಅದರ ಶುಭಾಶುಭ ಫಲಗಳನ್ನು ನೋಡಿ, ಅಶುಭವೇನಾದರೂ ಇದ್ದರೆ, ಕಂಚಿಯ ದೇವಾಲಯದಲ್ಲಿರುವ ಬಂಗಾರ ಹಾಗೂ ಬೆಳ್ಳಿಯ ಹಲ್ಲಿಯ ದರ್ಶನ ದೋಷ ಪರಿಹಾರ ವೆಂದು, ಇಲ್ಲದಿದ್ದರೆ ಅದನ್ನು ದರ್ಶಿಸಿದ‌ ವ್ಯಕ್ತಿಯ ಜೊತೆ ಮಾತನಾಡಿದರೂ ದೋಷ ಪರಿಹಾರ ಸಾಧ್ಯವೆಂದು ಹೇಳಲಾಗುತ್ತದೆ.

ಕಂಚಿಯ ಶ್ರೀ ವರದರಾಜ ಪೆರುಮಾಳ್ ದೇವಾಲಯದಲ್ಲಿ ಈ ಬಂಗಾರದ ಹಾಗೂ ಬೆಳ್ಳಿಯ ಹಲ್ಲಿಗಳ ಪ್ರತಿಕೃತಿಗಳಿದ್ದು, ಅದರ ಜೊತೆಗೆ ಸೂರ್ಯ ಹಾಗೂ ಚಂದ್ರರ ಮಾದರಿಯು ಜೊತೆಗಿದ್ದು , ಆ ಹಲ್ಲಿಗಳನ್ನು ಸ್ಪರ್ಶಿಸಿದರೆ ಸರ್ವ ದೋಷ ನಿವಾರಣೆಯಾಗುತ್ತದೆ ಎಂಬುದು ಹಿಂದಿನಿಂದ ಬಂದಿರುವ ನಂಬಿಕೆ. ಮಹಾ ಋಷಿ ಅಗಸ್ತ್ಯರ ಶಿಷ್ಯರು ಗುರುಗಳಿಗಾಗಿ ಪ್ರತಿದಿನ ಪವಿತ್ರ ಜಲ ತರುತ್ತದ್ದರು. ಒಮ್ಮೆ ಆ ರೀತಿ ತಂದ ನೀರನ್ನು ಸುರಿಯುವಾಗ ಅದರಿಂದ ಒಂದು ಹಲ್ಲಿ ಛಂಗನೆ ನೆಗೆಯಿತು.

ಕುಪಿತರಾದ ಗುರುಗಳ ಶಾಪದಿಂದ ಅವರಿಬ್ಬರೂ ಹಲ್ಲಿಗಳಾಗಿ ಕಂಚಿಯಲ್ಲಿ ಇದ್ದರು. ನಂತರ ಇಂದ್ರ ದೇವನು, ಗಜೇಂದ್ರನ ರೂಪದಲ್ಲಿ ಸೂರ್ಯ ಹಾಗೂ ಚಂದ್ರ ನೊಂದಿಗೆ ವರದರಾಜ ಪೆರುಮಾಳ್ ದೇವಾಲಯದಲ್ಲಿ ಆರಾಧನೆ ಮಾಡಲು ಬಂದಾಗ, ಅಗಸ್ತ್ಯ ಮಹರ್ಷಿಗಳ ಶಿಷ್ಯರಿಗೆ ಶಾಪ ವಿಮೋಚನೆ ಆಯಿತಂತೆ. ಅದರ ಪ್ರತೀಕವಾಗಿಯೇ ಅಂದರೆ ಸೂರ್ಯನ ಪ್ರತೀಕವಾಗಿ ಬಂಗಾರದ ಹಲ್ಲಿ, ಚಂದ್ರನ ಪ್ರತೀಕವಾಗಿ ಬೆಳ್ಳಿಯ ಹಲ್ಲಿಯ ನಿರ್ಮಾಣವಾಗಿದ್ದು, ದರ್ಶಿಸಿ, ಸ್ಪರ್ಶಿಸಿದವರ ದೋಷ ನಿವಾರಣೆಯಾಗುತ್ತದೆ ಎಂಬುದು ನಂಬಿಕೆಯಾಗಿದೆ.

ಹೀಗೆ ಹಲ್ಲಿಗಳಿಗೆ ಸಂಬಂಧಿಸಿದಂತೆ ಶುಭ ಹಾಗೂ ಆಶುಭಗಳೆರಡೂ ಬೆಸೆದುಕೊಂಡಿದ್ದು , ನಾವು ಕೇವಲ ಅದರಿಂದಾಗುವ ಅಶುಭವನ್ನೇ ಶಂಕಿಸುತ್ತಾ , ಅವುಗಳನ್ನು ಭಯದಿಂದ ನೋಡುತ್ತೇವೆ. ವಿಷಯ ಏನಾದರೂ ಅದು ಅವರವರ ನಂಬಿಕೆಗೆ ಬಿಟ್ಟಿದ್ದು.‌ಪೂಜಿಸುವವರಿಗೆ ಹಾವು ನಾಗ ದೇವತೆಯಾದರೆ, ಭಯ ಪಡುವವರಿಗೆ ಅದೊಂದು ವಿಷ ಜಂತು. ಹಲ್ಲಿಯ ವಿಚಾರದಲ್ಲೂ ಇದು ಅನ್ವಯ.

ಇ.ಸೋಮಶೇಖರ್
ಉಪನ್ಯಾಸಕ, ವಿಷನ್ ಅಕಾಡೆಮಿ
ಪ್ರಗತಿ ಪಿಯು ಕಾಲೇಜು
ಚಿಂತಾಮಣಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here