ಲಾಕ್ ಡೌನ್ ನಂತರ ಬಡವರು ಹಾಗೂ ನಿರ್ಗತಿಕರ ಸಹಾಯಕ್ಕೆ ಅನೇಕರು ಮುಂದಾದರೂ ಕೂಡಾ ಎಲ್ಲರಿಗೂ ಎಲ್ಲವೂ ತಲುಪುತ್ತಿಲ್ಲ ಎಂಬುದು ಅಕ್ಷರಶಃ ವಾಸ್ತವವಾಗಿದೆ. ಆದರೂ ಕೊರೊನಾ ಲಾಕ್ ಡೌನ್ ನಿಂದಾಗಿ ಅನೇಕರು ಮಾನವೀಯತೆ ಮೆರೆದು ತಮ್ಮಿಂದ ಸಾಧ್ಯವಾಗುವ ಸಹಾಯವನ್ನು ನೀಡಲು ಮುಂದಾಗಿರುವುದು ನಿಜಕ್ಕೂ ಉತ್ತಮ ಬೆಳೆವಣಿಗೆ. ಹೀಗೆ ಲಾಕ್ ಡೌನ್ ಸಂದರ್ಭದಲ್ಲಿ ಬಿಹಾರದ ನಳಂದ ಜಿಲ್ಲೆಯ ಬಿಹಾರ್ ಶರೀಫ್ ನಲ್ಲಿ ಅಪ್ರಾಪ್ತ ಬಾಲಕ ಕಿಶೋರ್ ನನ್ನು ಕಳ್ಳತನದ ಆರೋಪದಲ್ಲಿ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿಯ ವಿಚಾರಣೆ ಮಾಡಿದ ನ್ಯಾಯಾಧೀಶರಿಗೆ ಅಲ್ಲೊಂದು ಅನಿರೀಕ್ಷಿತ ವಿಷಯ ತಿಳಿದು ಬಂತು.

ಬಾಲಕ ಮನೆಯಲ್ಲಿ ತನ್ನ ತಾಯಿಯ ಹಸಿವನ್ನು ನೀಗಿಸಲು ಕಳ್ಳತನ ಮಾಡಿರುವುದಾಗಿ ಅವರಿಗೆ ತಿಳಿದು ಬಂದಿದೆ. ಬಾಲಕನು ಕಳ್ಳತನ ಮಾಡಲು ಕಾರಣವನ್ನು ತಿಳಿದ ನ್ಯಾಯಾಧೀಶರಾದ ಮನ್ವೀಂದ್ರ ಮಿಶ್ರಾ ಅವರ ಮನಸ್ಸು ಕರಗಿ, ಅವರು ಬಾಲಕನಿಗೆ ಶಿಕ್ಷೆ ವಿಧಿಸುವ ಬದಲಾಗಿ ಆತನ ಕುಟುಂಬಕ್ಕೆ ಅಗತ್ಯವಿರುವ ದವಸ ಧಾನ್ಯಗಳನ್ನು ಕೊಡಿಸಿದ್ದಾರೆ. ಬಾಲಕನ ಅಸಹಾಯಕತೆಯನ್ನು ಅರಿತ ಅವರು ಆತನನ್ನು ಆರೋಪದಿಂದ ಮುಕ್ತಿಗೊಳಿಸಿರುವುದು ಮಾತ್ರವೇ ಅಲ್ಲದೇ, ಆತನ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಒದಗಿಸಲಾಗುವ ಎಲ್ಲಾ ಸೌಲಭ್ಯ ನೀಡುವಂತೆ ಬಿಡಿಓ ಅವರಿಗೆ ಸೂಚನೆ ನೀಡಿದ್ದಾರೆ.‌

ತಂದೆಯನ್ನು ಕಳೆದುಕೊಂಡು, ಮಾನಸಿಕ ಅಸ್ವಸ್ಥಳಾದ ತಾಯಿಯನ್ನು ನೋಡಿಕೊಳ್ಳುತ್ತಿರುವ ಈ ಬಾಲಕನ ಕುಟುಂಬದವರಿಗೆ ಆಧಾರ್ ಕಾರ್ಡ್  ಪಡಿತರ ಸೌಲಭ್ಯ, ಆತನ ತಾಯಿಗೆ ವಿಧವಾ ವೇತನ ಹಾಗೂ ಮನೆ ಕಟ್ಟಿಸಲು ಸೂಕ್ತ ಸೌಲಭ್ಯಗಳನ್ನು ನೀಡುವಂತೆ ಅವರು ನಿರ್ದೇಶನವನ್ನು ನೀಡಿದ್ದಾರೆ. ಕಿಶೋರ್ ನಿಗೆ ನ್ಯಾಯಾಧೀಶರ ನೆರವು ದೊರೆಯಿತು. ಆದರೆ ಇಂತಹ ಅದೆಷ್ಟು ಜನ ಇನ್ನೂ ಸಂಕಷ್ಟ ದಲ್ಲಿ ಸಿಲುಕಿರುವುರೋ ಎಂಬುದು ವಿಷಾದನೀಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here