ಬೆಳಗಾವಿ: ರಾಜ್ಯದಲ್ಲಿ ಬೆಳ್ಳಂಬಳ್ಳಿಗೆ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ಸುಖನಿದ್ರೆಯಲ್ಲಿ ಜಾರಿದ ಸರ್ಕಾರಿ ಅಧಿಕಾರಿಗಳ ಮನೆಗೆ ದಿಡೀರ್ ಭೇಟಿ ನೀಡಿದ್ದು ಸರ್ಕಾರಿ ಅಧಿಕಾರಿಗಳು ಕಂಗಾಲಾಗಿದ್ದಾರೆ.
ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನ ಜಾಲಾಡಿ ಇಂಚಿಂಚು ಶೋಧ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಬೆಳಗಾವಿ ನಗರದಲ್ಲೇ ಇಬ್ಬರು ಅಧಿಕಾರಿಗಳಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಎಂ.ಎಂ ಬಿರಾದಾರ್ ಪಾಟೀಲ್ ಮನೆ ಮೇಲೂ ಲೋಕಾಯುಕ್ತ ಅಧಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವೇಶ್ವರಯ್ಯ ನಗರದಲ್ಲಿರುವ ಇವರ ನಿವಾಸದ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಆಸ್ತಿಯನ್ನ ಪತ್ತೆ ಹಚ್ಚಿದೆ. ಅಪಾರ್ಟ್ಮೆಂಟ್ ನಲ್ಲಿ ಪ್ಲ್ಯಾಟ್ ಒಂದರಲ್ಲಿರುವ ಈ ಬಿರಾದಾರ್ ಪಾಟೀಲ್ ಬರೀ ನಿವಾಸ ಅಷ್ಟೇ ಅಲ್ಲದೆ ಖಾನಾಪುರ ಮತ್ತು ಕಿತ್ತೂರ ಪಟ್ಟಣದಲ್ಲಿರುವ ಮನೆ ಮೇಲೆಯೂ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಜೂನ್ ನಲ್ಲಿ ಇದೇ ಎಂ.ಎಂ.ಬಿರಾದಾರ್ ಪಾಟೀಲ್ ಗುತ್ತಿಗೆದಾರರಿಂದ ಹಣ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ. ಅಂದಿನಿಂದ ಈತನ ಮೇಲೆ ಕಣ್ಣಿಟ್ಟಿದ್ದ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಸೇರಿದಂತೆ ಎಲ್ಲವನ್ನೂ ಸಂಗ್ರಹಿಸಿ ಇಂದು ದಾಳಿ ನಡೆಸಿದ್ದಾರೆ. ಇನ್ನೂ ದಾಳಿ ವೇಳೆ ಒಂದು ಕೋಟಿ 35ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಸಿಕ್ಕಿದ್ದು ಇದರಲ್ಲಿ ಎರಡು ಲಕ್ಷ ರೂಪಾಯಿ ನಗದ, ಖಾನಾಪುರದ ಬ್ಯಾಂಕ್ ನ ಲಾಕರ್ ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಕೂಡ ಸಿಕ್ಕಿದ್ದು ಇನ್ನೂ ಕೂಡ ಪರಿಶೀಲನೆ ಮುಂದುವರೆದಿದೆ.
ಇನ್ನು ಅಪ್ಪಾಸಾಹೇಬ್ ಕಾಂಬಳೆ ಎಂಬ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರೇ ಸುಸ್ತು ಹೊಡೆದು ಹೋಗಿದ್ದಾರೆ. ಯಾಕಂದ್ರೇ ಕಲಬುರಗಿ ಕಚೇರಿಯಲ್ಲಿ ಇರಬೇಕಾದ ದಾಖಲೆಗಳು ಕಾಂಬಳೆ ಅವರ ಬೆಳಗಾವಿಯ ರಾಮತೀರ್ಥ ನಗರದ ನಿವಾಸದಲ್ಲಿ ಪತ್ತೆಯಾಗಿವೆ. ಅದು ಒಂದಲ್ಲಾ ಎರಡಲ್ಲಾ ನೂರಾರು ದಾಖಲೆಗಳೇ ಇಲ್ಲಿ ಪತ್ತೆಯಾಗಿದ್ದು ಎಲ್ಲವನ್ನೂ ಪರಿಶೀಲನೆ ಮಾಡುವಷ್ಟರಲ್ಲಿ ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ. ಇನ್ನೂ ಮನೆಯಲ್ಲಿ ಆರು ಲಕ್ಷ ನಗದು, 250 ಗ್ರಾಂ ಚಿನ್ನಾಭರಣ, ಬೆಳ್ಳಿ ಸೇರಿದಂತೆ ಆಸ್ತಿ ಪತ್ರಗಳು ಕೂಡ ಸಿಕ್ಕಿವೆ. ನಿವಾಸದ ಜತೆ ಜತೆಗೆ ಆಟೋ ನಗರದಲ್ಲಿರುವ ಕಚೇರಿ ಮೇಲೆಯೂ ದಾಳಿ ನಡೆಸಿದ್ದು ಅಲ್ಲಿಯೂ ಆಸ್ತಿ ಪತ್ರಗಳು ಸಿಕ್ಕಿದ್ದು ಎಲ್ಲವನ್ನೂ ಜಪ್ತಿ ಮಾಡಿಕೊಂಡು ತನಿಖೆ ಶುರು ಮಾಡಿದ್ದಾರೆ. ಇನ್ನೂ ಲೋಕಾಯುಕ್ತ ದಾಳಿ ವೇಳೆ ಅಪ್ಪಾಸಾಹೇಬ್ ಕಾಂಬಳೆ ಮನೆಯಲ್ಲಿರಲಿಲ್ಲ ಆದ್ರೇ ಕುಟುಂಬಸ್ಥರ ಸಮ್ಮುಖದಲ್ಲಿ ಎಲ್ಲವನ್ನೂ ಅಧಿಕಾರಿಗಳು ಜಾಲಾಡಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.