ಅಗ್ರಪೂಜೆಗೆ ಭಾಜನನಾದ ವಿಘ್ನ ನಿವಾರಕ ಶ್ರೀ ಗಣೇಶನೆಂದರೆ ಎಲ್ಲರಿಗೂ ಭಯ ಭಕ್ತಿಗಳಿವೆ. ಇಂತಹ ಗಣಗಳ ಒಡೆಯನಾದ, ಗಣೇಶನ ಅದೆಷ್ಟೋ ಪ್ರಖ್ಯಾತ ಗುಡಿಗಳು, ಮಂದಿರಗಳು, ಬೃಹತ್ ಆಲಯಗಳು ನಮ್ಮ ದೇಶದಲ್ಲಿದೆ. ಅಂತಹ ಗಣೇಶ ಮಂದಿರಗಳಲ್ಲಿ ಬಹು ವಿಶೇಷವಾದುದು ಹಾಗೂ ಚಮತ್ಕಾರಿಯೂ ಆದುದು ಖಜ್ರನಾ ಗಣಪತಿ ದೇವಸ್ಥಾನ. ಇಂಧೋರ್ನ ವಿಜಯನಗರದ ಖಜುರಾನಾ ಚೌಕ್ ಬಳಿ ಇದೆ ಈ ಗಣೇಶನ ಆಲಯ. ಈ ದೇವಾಲಯವನ್ನು ಮರಾಠರ ಅಹಲ್ಯಾ ಬಾಯಿ ಹೋಳ್ಕರ್ ಅವರು ನಿರ್ಮಿಸಿದರು. ಈ ಆಲಯದಲ್ಲಿ ಗಣಪತಿಯ ಪ್ರತಿಮೆಯನ್ನು ಸಿಂಧೂರದಿಂದ ಮಾತ್ರ ನಿರ್ಮಿಸಿದ್ದಾರೆ.

ದೇವಾಲಯದಲ್ಲಿ ತಾಯಿ ದುರ್ಗಾ, ಮಹಾಕಾಳೇಶ್ವರ, ಭೂಗತ ಶಿವಲಿಂಗವಿದೆ, ಗಂಗಾ ದೇವಿ, ಮಾತೆ ಶ್ರೀಲಕ್ಷ್ಮಿ ಜೊತೆಗೆ ಹನುಮಂತನ ದೇವಸ್ಥಾನಗಳು ಕೂಡಾ ಇಲ್ಲಿವೆ. ಶನಿದೇವನ ಹಾಗೂ ಸಾಯಿ ನಾಥರ ದೊಡ್ಡ ದೇವಸ್ಥಾನವೂ ಇರುವುದರಿಂದ ಬರುವ ಭಕ್ತಾದಿಗಳಿಗೆ ದೇವರುಗಳು ನೆಲೆಸಿರುವ ದಿವ್ಯಧಾಮ ಎನಿಸುತ್ತದೆ ಈ ಪವಿತ್ರ ಸ್ಥಳ. ಪ್ರತಿ ದಿನ 10,000 ಕ್ಕಿಂತ ಹೆಚ್ಚು ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಆವರಣದಲ್ಲಿ ಮುಖ್ಯ ದೇವಸ್ಥಾನಕ್ಕೆ ಹೆಚ್ಚುವರಿಯಾಗಿ, 33 ಇತರೆ ಚಿಕ್ಕ ದೇವಾಲಯಗಳು ಇವೆ. ಈ ದೇವಾಲಯದ ಬಗ್ಗೆ ಒಂದು ಕಥೆ ಸಾಕಷ್ಟು ಪ್ರಚಲಿತವಾಗಿದೆ.

ಪಂಡಿತ್ ಮಂಗಳ ಭಟ್ ಎಂಬುವವರಿಗೆ 1735 ರಲ್ಲಿ ಒಮ್ಮೆ ಕನಸಿನಲ್ಲಿ ಕಾಣಿಸಿಕೊಂಡ ಶ್ರೀ ಗಣೇಶನು ತಾನಲ್ಲಿ ಪ್ರಕಟವಾಗಿ, ಜನರ ಸಂಕಷ್ಡಗಳನ್ನು ಪರಿಹರಿಸುವುದಾಗಿ ಹೇಳಿದೆ. ಇದರ ನಂತರ ಶ್ರೀ ಶ್ರೀ ಗಣೇಶನು ಕಳಶದಿಂದ ಉದ್ಭವಿಸಿದನೆಂದು ಪ್ರತೀತಿ. ನಂತರ ದೇವಾಲಯವನ್ನು ಸ್ಥಾಪಿಸಲಾಯಿತು. ಅಲ್ಲಿಂದೀಚೆಗೆ, ವಿದೇಶದಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ಇದೆಲ್ಲದಕ್ಕಿಂತ ಮುಖ್ಯವಾದ ಹಾಗೂ ಬಹಳ ಆಸಕ್ತಿಕರ ವಿಷಯ ಏನೆಂದರೆ ಈ ಗಣೇಶ ಮಂದಿರ ಇಷ್ಟಾರ್ಥ ಪೂರೈಸುವ ಮಂದಿರ ಎಂದೇ ಪ್ರಸಿದ್ಧವಾಗಿದೆ.

ಈ ಆಲಯದ ಮತ್ತೊಂದು ವಿಶೇಷ ಏನೆಂದರೆ ಇಲ್ಲಿ ಭಕ್ತರ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ಪ್ರತಿಯೊಬ್ಬರ ಕೋರಿಕೆಯನ್ನು ಕೂಡಾ ಆ ಗಣೇಶನು ತೀರಿಸುವನೆಂಬ ಅಚಲವಾದ ನಂಬಿಕೆಯಿದೆ. ನಮ್ಮ ಕೋರಿಕೆ ನೆರವೇರಬೇಕೆಂದರೆ, ಆಲಯದಲ್ಲಿ ನೆಲೆಸಿರುವ ಗಣೇಶನ ಬೆನ್ನಿನ ಮೇಲೆ ಉಲ್ಟಾ ಆಗಿ ಸ್ವಸ್ಥಿಕ್ ಚಿಹ್ನೆಯನ್ನು ಬರೆಯಬೇಕು. ನಂತರ ಆಲಯದಲ್ಲಿ ಒಂದು ಪವಿತ್ರ ದಾರ ಕಟ್ಟಬೇಕು. ಕೋರಿಕೆ ತೀರಿದ ಮೇಲೆ‌ ಮತ್ತೆ‌ ಆಲಯಕ್ಕೆ ಬಂದು ಆ ದಾರವನ್ನು ಬಿಚ್ಚಬೇಕು. ಈ ಆಲಯದಲ್ಲಿ ಇಷ್ಟಾರ್ಥಗಳು ಪೂರ್ಣವಾಗುವವೆಂದು ದೂರ ದೂರದಿಂದ ಭಕ್ತರು ಇಲ್ಲಿಗೆ ಬರುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here