ಮಲ್ಲೇಶ್ವರಂ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಈ ಪ್ರದೇಶ ಹಿಂದೆ ದಟ್ಟವಾದ ಕಾಡಾಗಿತ್ತು. ಕಾಡಿನ ಮಧ್ಯೆ ಒಂದು ದೊಡ್ಡ ಗುಡ್ದವೂ ಇತ್ತು. ಆ ಗುಡ್ಡದ ಮೇಲೆ ನಿಂತರೆ, ಸುತ್ತ ಮುತ್ತಲಿನ ಪ್ರದೇಶ ಕಾಣುತಿತ್ತು. ಈಗಿನ ಸ್ಯಾಂಕಿ ಕೆರೆಯ ಪಕ್ಕದಲ್ಲಿ ಮಲ್ಲಪುರ ಎಂಬ ಗ್ರಾಮವಿತ್ತು.

ಆಗಿನ ಕಾಲದಲ್ಲಿ ತುಂಬಾ ಜನ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಹೀಗೆ ಬಂದು ಹೋಗುತ್ತಿದ್ದ ಪ್ರಯಾಣಿಕರು ರಾತ್ರಿಯ ಸಮಯದಲ್ಲಿ ಈ ಗುಡ್ಡದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು.ಬಹಳ ವರ್ಷಗಳ ಹಿಂದೆ (1898 ರಲ್ಲಿ) ಪರವೂರಿನಿಂದ ಬಂದ ವೀಳ್ಯದೆಲೆ ವ್ಯಾಪಾರಿ ಮಲ್ಲಪ್ಪ ಶೆಟ್ಟಿ ಎಂಬವರು ಮಲ್ಲೇಶ್ವರ ವ್ಯಾಪ್ತಿಯಲ್ಲಿ ವೀಳ್ಯದೆಲೆ ಮಾರಾಟ ಮಾಡುತ್ತಿದ್ದರಂತೆ.

ಪ್ರತಿ ನಿತ್ಯ ತಮ್ಮ ಊರಿನಿಂದ ಇಲ್ಲಿಗೆ ಆಗಮಿಸುವ ಇವರು ರಾತ್ರಿ ಊರಿಗೆ ಹಿಂತಿರುಗುತ್ತಿದ್ದರಂತೆ. ಒಂದು ದಿನ ಸಂಜೆ ತಮ್ಮ ಊರಿಗೆ ಹಿಂತಿರುಗಲಾಗದೆ ಅರಳಿ ಕಟ್ಟೆಯಂತಹ ಕಟ್ಟೆಯ ಬಳಿ ರಾತ್ರಿ ಕಳೆಯಲು ಮುಂದಾದರು. ಅಲ್ಲಿರುವ ಎರಡು ಕಲ್ಲುಗಳನ್ನು ಒಲೆಯಂತೆ ಬಳಸಿ ಊಟಕ್ಕಾಗಿ ಅನ್ನ ಬೇಯಿಸಲು ಆರಂಭಿಸಿದಾಗ ಅನ್ನ ರಕ್ತದ ಬಣ್ಣಕ್ಕೆ ತಿರುಗಿತಂತೆ.

ಅವರು ಕಲ್ಲುಗಳನ್ನು ಪರೀಕ್ಷಿಸಿ ನೋಡಿದಾಗ ಒಲೆಯಂತೆ ಬಳಿಸಿದ ಆ ಕಲ್ಲುಗಳು ಶಿವಲಿಂಗದ ಆಕಾರ ಪಡೆದುಕೊಂಡವಂತೆ. ಸೂಕ್ಷ್ಮವಾಗಿ ನೋಡಿದಾಗ ಅಲ್ಲಿ ಉದ್ಭವ ಶಿವಲಿಂಗವಿರುವ ದೃಶ್ಯ ಗೋಚರವಾಯಿತು. ಈ ದೃಶ್ಯ ನೋಡಿ ಹೆದರಿದ ಮಲ್ಲಪ್ಪ ಶೆಟ್ಟರು ಪ್ರಜ್ಞೆ ತಪ್ಪಿ ಬಿದ್ದರಂತೆ. ನಂತರ ಎಚ್ಚರಗೊಂಡ ಶೆಟ್ಟರು ಇದು ದೇವರ ಆವಾಸದ ಸ್ಥಳ ತಾನು ತಪ್ಪು ಮಾಡಿದನೆಂದು ಪಶ್ಚಾತ್ತಾಪ ಪಟ್ಟರಂತೆ.

ಈ ಸ್ಥಳದಲ್ಲಿ ದೇವಾಲಯ ನಿರ್ಮಿಸುವುದಾಗಿ ಹರಕೆ ಹೊತ್ತರಂತೆ. ನಂತರ ರಾತ್ರಿ ಅಲ್ಲಿಯೇ ನಿದ್ರೆ ಮಾಡಿ ಸ್ನೇಹಿತರಿಗೆ, ಬಂಧುಗಳಿಗೆ ನಡೆದ ಘಟನೆ ಬಗ್ಗೆ ವಿವರಿಸಿದರಂತೆ. ಕೆಲ ದಿನಗಳ ನಂತರ ಈ ಸ್ಥಳದಲ್ಲಿ ಶ್ರೀಮಲ್ಲಿಕಾರ್ಜುನ ಸ್ವಾಮಿಯ ದೇವಾಲಯ ನಿರ್ಮಿಸಿ, ಕಲಶ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಿದರಂತೆ.

ಇನ್ನೊಂದು ಕಥೆಯ ಪ್ರಕಾರ ಪುರಾಣ ಕಾಲದಲ್ಲಿ ಗೌತಮ ಋಷಿಗಳು ಮಹಾ ತಪಸ್ಸನ್ನಾಚರಿಸಲು ಈ ಸ್ಥಳದಲ್ಲಿ ಕುಳಿತಿದ್ದಾಗ ಶಿವ ಪ್ರತ್ಯಕ್ಷನಾಗಿ ಹರಸಿದ ಸ್ಥಳ ಇದಾಗಿಯಂತೆ. ಈ ಪ್ರದೇಶ ಹಿಂದೆ ದಟ್ಟವಾದ ಕಾಡಿನಿಂದ ಕೂಡಿದ ಸ್ಥಳವಾಗಿತ್ತು.ಇಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ನಿರ್ಮಾಣವಾದ ಕಾರಣ ಇದು ಕಾಡು ಮಲ್ಲಿಕಾರ್ಜುನ ದೇವಾಲಯ ಎಂಬ ಹೆಸರು ಪಡೆದು ಕ್ರಮೇಣ ಕಾಡು ಮಲ್ಲೇಶ್ವರ ಎಂದು ಪ್ರಸಿದ್ಧವಾಯಿತು.

ಈಗ ಈ ದೇವಾಲಯದ ಸುತ್ತಲಿನ ಪ್ರದೇಶ ಮಲ್ಲೇಶ್ವರ ಎಂದು ಕರೆಯಲ್ಪಡುತ್ತಿದ್ದು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿ ತಲೆ ಎತ್ತಿದೆ.ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದ ಪರಿಸರ ಸುಂದರವಾಗಿದೆ. ದೇಗುಲದ ಪರಿಸರದಲ್ಲಿ ಬಿಲ್ವಪತ್ರೆ, ಪಾರಿಜಾತ, ಶ್ರೀಗಂಧ, ಬೇವು ಇನ್ನಿತರ ಪತ್ರ ವೃಕ್ಷಗಳಿವೆ. ಮಲ್ಲೇಶ್ವರ ಬಡಾವಣೆ ಜನದಟ್ಟಣೆಯ ಪ್ರದೇಶವಾಗಿದ್ದರೂ ಈ ದೇವಾಲಯದ ಪರಿಸರ ಪ್ರಶಾಂತವಾಗಿದೆ.

ದೇವಾಲಯದ ಆವರಣದಲ್ಲಿ ಗಣಪತಿ, ಕಾಶಿವಿಶ್ವನಾಥ, ಆಂಜನೇಯ, ಕಾಲಭೈರವ, ಅರುಣಾಚರೇಶ್ವರ, ದಕ್ಷಿಣಾಮೂರ್ತಿ, ಪಾರ್ವತಿ, ಸುಬ್ರಹ್ಮಣ್ಯೇಶ್ವರ, ದುರ್ಗಾದೇವಿ ಮತ್ತು ನವಗ್ರಹ ದೇವರ ಗ್ರಹಗಳಿವೆ. ಇವುಗಳಿಗೂ ಭಕ್ತರಿಂದ ಪೂಜೆ ಸಲ್ಲುತ್ತದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲದಲ್ಲಿ ನಿತ್ಯ ರುದ್ರಾಭಿಷೇಕ ನಡೆಸಲಾಗುತ್ತದೆ. ದಿನವಿಡೀ ದರ್ಶನಕ್ಕೆ ಅವಕಾಶವಿದೆ.

ಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆ, ಬ್ರಹ್ಮರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು, ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ದೀಪೋತ್ಸವ, ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ದಶಮಿಯವರೆಗೆ ವಿಶೇಷ ಪೂಜೆ ನಡೆಯುತ್ತದೆ.ಶಿಲಾ ಕಲ್ಲುಗಳಿಂದ ನಿರ್ಮಿತವಾದ ಈ ದೇವಾಲಯದ ಎದುರು ಸುಂದರವಾದ ಧ್ವಜಸ್ತಂಭ ಮತ್ತು ಅತ್ಯಾಕರ್ಷಕವಾದ ಎತ್ತರದ ವಿಮಾನಗೋಪುರವಿದೆ.

ದೇವಾಲಯದ ಮುಂದೆ ಅಶ್ವಥಕಟ್ಟೆಯಿದ್ದು, ಹಲವಾರು ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ನಾಗರ ಪಂಚಮಿಯಂದು ನಾಗರ ಕಲ್ಲುಗಳಿಗೆ ತನಿ ಎರೆಯಲಾಗುತ್ತದೆ.ಪ್ರತಿವರ್ಷ ಮಾಘ ಮಾಸದ ಚತುರ್ದಶಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಮಾಘ ಬಹುಳ ಷಷ್ಟಿಯಂದು ನಡೆಯುವ ಧ್ವಜಾರೋಹಣದ ನಡೆದ ಬಳಿಕ, ಮಲ್ಲಿಕಾರ್ಜುನಸ್ವಾಮಿಗೆ ಪ್ರತಿನಿತ್ಯ ವೃಷಭವಾಹನೋತ್ಸವ, ಶೇಷವಾಹನೋತ್ಸವ, ಗಜವಾಹನೋತ್ಸವಗಳು ನಡೆಯುತ್ತವೆ.

ಮಹಾ ಶಿವರಾತ್ರಿಯ ದಿನ ಇಲ್ಲಿ ಗಿರಿಜಾ ಕಲ್ಯಾಣ ಜರುಗುತ್ತದೆ. ಬ್ರಹ್ಮೋತ್ಸವದ ಬಳಿಕ ದಕ್ಷಿಣಾಭಿಮುಖ ನಂದಿ ದೇವರ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ ಆಕರ್ಷಕ. ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಇತ್ಯಾದಿಗಳು ನಡೆಯುತ್ತವೆ. ಕನ್ನಡ ಚಲನ ಚಿತ್ರಗಳ ಮಹೂರ್ತ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಅನೇಕ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೆ ಮೊದಲು ಇಲ್ಲಿ ಪೂಜೆ ಸಲ್ಲಿಸುವ ಪರಿಪಾಠವಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here