ಶ್ರೀ ವೆಂಕಟೇಶ್ವರ ಸ್ವಾಮಿಯವರ ಬಗ್ಗೆ ಅದೆಷ್ಟು ಹೇಳಿದರೂ ಮುಗಿಯದು, ಏಳು ಬೆಟ್ಟಗಳ ಮೇಲೆ ನೆಲೆಸಿರುವ ಶ್ರೀನಿವಾಸನನ್ನು ಅದೆಷ್ಟು ಹೊಗಳಿದರೂ ಸಾಲದು. ಶ್ರೀ ವೆಂಕಟೇಶ್ವರ ಸ್ವಾಮಿಯವರು ಶಿಲಾರೂಪ ಧರಿಸಿ ನಿಂತ ದಿನದಿಂದಲೂ ತಿರುಪತಿಯು ಭೂ ವೈಕುಂಠವೇ ಆಗಿದೆ. ಸ್ವಾಮಿಯವರು ಈ ಭೂಮಿಯ ಮೇಲೆ ಶಿಲಾರೂಪ ಧರಿಸಿ, ಮೊದಲು ನೆಲೆ ನಿಂತ ಸ್ಥಳ ತಿರುಮಲ ಎಂದೇ ಭಕ್ತಕೋಟಿಯ ನಂಬಿಕೆ. ಆದರೆ ಇಲ್ಲಿ ನಮ್ಮ ನಂಬಿಕೆಗೆ ಮೀರಿದ ಇನ್ನೊಂದು ಸತ್ಯವಿದೆ. ಅದು ಶ್ರೀ ಮಹಾವಿಷ್ಣು ಈ ಭೂಮಿಯ ಮೇಲೆ ಶಿಲಾರೂಪ ಧರಿಸಿ ನೆಲೆ ನಿಂತ ಮೊದಲ ಸ್ಥಳ ತಿರುಪತಿಯ ತಿರುಮಲ ಅಲ್ಲ. ಸ್ವಾಮಿಯವರು ತಿರುಮಲ ವಾಸಿಯಾಗುವ ಸುಮಾರು 9000 ವರ್ಷಗಳ ಮೊದಲೇ ಭೂಮಿಯ ಮೇಲೆ ಭಕ್ತನಿಗಾಗಿ ಶಿಲಾರೂಪ ಧರಿಸಿ ನಿಂತಿರುವ ಇನ್ನೊಂದು ಸ್ಥಳವಿದ್ದು ಅದನ್ನು ಭಕ್ತರು ‘ಆದಿ ತಿರುಪತಿ’ ಎಂದೇ ಕರೆಯುತ್ತಾರೆ. ಹಾಗಾದರೆ ‌ಬನ್ನಿ ಆ ಸ್ಥಳ ಪುರಾಣದ ಬಗ್ಗೆ ತಿಳಿಯೋಣ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಿವಲಿ ಎಂಬ ಹಳ್ಳಿಯಿಂದ ಎರಡು ಕಿಮೀ ದೂರದಲ್ಲಿದೆ ಈ ಆದಿ ತಿರುಪತಿ. ಅಲ್ಲಿಯೇ ಸ್ವಾಮಿಯವರು ಶ್ರೀ ಶೃಂಗಾರ ವಲ್ಲಭನ ರೂಪದಲ್ಲಿ ನೆಲೆ‌ ನಿಂತಿದ್ದಾರೆ‌. ನಾವು ವಿಷ್ಣು ಪುರಾಣ ಹಾಗೂ ಮಹಾ ಭಾಗವತದಲ್ಲಿ ಕೇಳಿರುವ ಹೆಸರು ಧೃವ. ಹಿಂದೂಗಳು ಆತನನ್ನು ಧೃವ ನಕ್ಷತ್ರವೆಂದು ಕರೆದು ಇಂದಿಗೂ ಆರಾಧಿಸುವರು. ರಾಜ ಉತ್ಥಾನ ಪಾದನ ಹಿರಿಯ ಪತ್ನಿಯ ಮಗನಾದ ಧೃವನು, ತನ್ನ ಮಲತಾಯಿ‌ ಮಾಡಿದ ಅವಮಾನವನ್ನು ಭರಿಸಿ, ಆಕೆ ಹೇಳಿದಂತೆ ತನಗೂ, ತನ್ನ ತಾಯಿಗೂ ಗೌರವ ಸಿಗಲು ಮಹಾವಿಷ್ಣುವಿನ ವರ ಪಡೆಯಬೇಕೆಂದು ಅರಮನೆ ತೊರೆದು ಅರಣ್ಯ ಸೇರಿದ. ಅಲ್ಲಿ ನಾರದರ ಹಾಗೂ ಶಾಂಡಿಲ್ಯ ಮಹರ್ಷಿಗಳ ಆಶೀರ್ವಾದದಿಂದ ಮಹಾವಿಷ್ಣುವಿನ ತಪ್ಪಸ್ಸಿಗೆ ನಿಂತ ಬಾಲಕ ಧೃವ.

ಆತನ ಘೋರ ತಪಸ್ಸಿಗೆ ಮೆಚ್ಚಿದ ನಾರಾಯಣನು ಬಾಲಕ ಧೃವನ ಮುಂದೆ ಪ್ರತ್ಯಕ್ಷನಾದ. ಆದರೆ ದೇವದೇವನ ಕಾಂತಿಯನ್ನು ನೋಡಿ ಭಯಭೀತನಾದ ಧೃವನಿಗೆ ಶ್ರೀ ಮಹಾವಿಷ್ಣುವು ಭಯ ಪಡಬೇಡ ಮಗು ನಾನು ನಿನ್ನಷ್ಟೇ ಇದ್ದೇನೆ ಎಂದು‌ ಹೇಳಿದ. ಮುಂದೆ ಈ ಮಾತೇ‌‌ ಒಂದು ಅದ್ಭುತ ಕ್ಕೆ ಕಾರಣವಾಯಿತು. ಧೃವನಿಗೆ ವರ ನೀಡಿದ ನಂತರ ಮಹಾ ವಿಷ್ಣುವನ್ನು ಅಲ್ಲೇ ನೆಲೆಸುವಂತೆ ಕೇಳಿಕೊಂಡ ಧೃವನ ಕೋರಿಕೆಯ ಮೇರೆಗೆ ಶ್ರೀ ಮಹಾವಿಷ್ಣು ಭೂಮಿಯ ಮೇಲೆ ಶಿಲಾ ರೂಪ ಧರಿಸಿ ನಿಂತ ಆ ಸ್ಥಳವೇ ಆದಿ ತಿರುಪತಿ. ಸ್ವಾಮಿಯವರು ತಿರುಮಲದಲ್ಲಿ ನೆಲೆಸಿದ್ದು ಕಲಿಯುಗದಲ್ಲಾದರೆ, ಅದಕ್ಕಿಂತ ೯೦೦೦ ವರ್ಷಗಳ ಮೊದಲೇ ಶ್ರೀ ಶೃಂಗಾರ ವಲ್ಲಭನಾಗಿ ಆದಿ ತಿರುಪತಿಯಲ್ಲಿ‌ ನೆಲೆಸಿದ್ದಾರೆ.

ಹೀಗೆ ಅಲ್ಲಿ ನೆಲೆ ನಿಂತ ದೇವ ದೇವನ ಶಿಲಾ ರೂಪ‌ ಮತ್ತೊಂದು ವಿಸ್ಮಯ ಸೃಷ್ಟಿಸಿದೆ. ಇಲ್ಲಿ ನಾಲ್ಕಡಿಯವರಿಗೆ ವಿಗ್ರಹ ನಾಲ್ಕಡಿ ಕಂಡರೆ, ಆರಡಿ ಇರುವವರಿಗೆ ಆರಡಿಯಲ್ಲೇ ಕಾಣುತ್ತದೆ. ಬ್ರಿಟಿಷ್ ರಾಣಿ ಇಲ್ಲಿಗೆ ಭೇಟಿ‌ ನೀಡಿದ ಸಂದರ್ಭದಲ್ಲಿ ಆಕೆಯು‌ ಈ ವಿಸ್ಮಯ ನೋಡಿ ಬೆರಗಾದ ದಾಖಲೆ,‌ಆಕೆ ದೇವಳಕ್ಕೆ ನೀಡಿದ ಧನ‌ ಸಹಾಯದ ದಾಖಲೆಯನ್ನು ಅಲ್ಲಿ ಕೆತ್ತನೆ‌ ಮಾಡಲಾಗಿದೆ. ಸ್ವಾಮಿಯವರು ಧೃವನಿಗೆ ನಾನು ನಿನ್ನಷ್ಟೇ ಇರುವೆನು ಎಂದು ಅಂದು ಹೇಳಿದ ಮಾತಿನಂತೆ ಇಂದಿಗೂ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಕಲಿಯುಗದಲ್ಲಿ ಚಿತ್ತೂರು ಜಿಲ್ಲೆಯ ತಿರುಮಲದಲ್ಲೇ ಶ್ರೀ ಮಹಾವಿಷ್ಣು ಮೊದಲ ಬಾರಿಗೆ ಶಿಲಾರೂಪ ಧರಿಸಿ ನಿಂತನೆಂಬ ನಮ್ಮ ತಪ್ಪು ತಿಳುವಳಿಕೆ, ಈ ಕತೆಯನ್ನು ಕೇಳಿ ಬದಲಾಗಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here