ಜೆಡಿಎಸ್ ಪಕ್ಷವು ಈಗ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದೆ. ನಾನು ಕೂಡಾ ನೆಪ ಮಾತ್ರಕ್ಕೆ ಕಾರ್ಯಾಧ್ಯಕ್ಷನಾಗಿದ್ದೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿ, ಜೆಡಿಎಸ್ ತೊರೆಯುವ ಬಗ್ಗೆ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ ಅವರು, ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುತ್ತಿದೆ. ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಜೆಡಿಎಸ್‌ನಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ನೇರವಾಗಿಯೇ ಜೆಡಿಎಸ್ ಮುಖಂಡರ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.ವಯಸ್ಸಾಗುತ್ತಿದ್ದಂತೆ ಜವಾಬ್ದಾರಿಗಳು ಹೆಚ್ಚುತ್ತವೆ. ಲೋಕಸಭಾ ಚುನಾವಣೆಯ ಬಳಿಕ ನಾನು ಮಾಧ್ಯಮಗಳಿಂದ ದೂರ ಉಳಿದೆ.

ಇದು ಪಕ್ಷದ ಕಾರಣಕ್ಕಾಗಿ ಅಲ್ಲ. ವೈಯಕ್ತಿಕ ಕಾರಣದಿಂದ ದೂರ ಇದ್ದೆ. ಮನಸ್ಸಿಗೆ ನೋವಾಗಿದೆ. ಕಾರ್ಯಕರ್ತರಿಗೂ ನೋವಾಗಿದೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇರದೇ ಇರುವುದು ಬೇಸರದ ಸಂಗತಿ,. ಜೆಡಿಎಸ್ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.
ನಾನು ನಿಷ್ಕ್ರಿಯ ಪಕ್ಷದ ನಿಷ್ಕ್ರಿಯ ಕಾರ್ಯಾಧ್ಯಕ್ಷ ಎಂದು ತಮ್ಮನ್ನು ಬಣ್ಣಿಸಿದ ಅವರು, ನಾನಾಗಿಯೆ ಜೆಡಿಎಸ್ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ. ಬೇಕಾದರೆ ಅವರೇ ನನ್ನ ರಾಜೀನಾಮೆ ಕೇಳಬಹುದು. ಇಲ್ಲವೇ ನನ್ನನ್ನು ಹುದ್ದೆಯಿಂದ ತೆಗೆಯಬಹುದು. ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತನೇ ಆಗಿರಲಿ, ನನ್ನೊಂದಿಗೆ ಇರುವ ಬಂಗಾರಪ್ಪ ಅನ್ನುವ ಹಸರೇ ದೊಡ್ಡ ಹುದ್ದೆ ಎಂದರು.


ನಾನು ಈಗ ಜೆಡಿಎಸ್‌ನಲ್ಲಿಯೇ ಇದ್ದೇನೆ. ಪಕ್ಷ ಬಿಡುವಾಗ ಎಲ್ಲರಿಗೂ ಹೇಳಿಯೇ ಹೋಗುತ್ತೇನೆ. ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಜೆಡಿಎಸ್ ಪಕ್ಷ ಬಿಡುವಾಗ ಅವರೊಂದಿಗೆ ಇದ್ದೆ. ಅವರೊಂದಿಗೆ ಇದ್ದು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೆ. ಅವರಿಗೆ ಜೆಡಿಎಸ್ ಪಕ್ಷ ತೊರೆಯುವಂತಹ ಸಂದರ್ಭ ಏನೂ ಬಂದಿತ್ತೋ ಗೊತ್ತಿಲ್ಲ. ಆದರೆ ಮಾಜಿ ಸಚಿವ ಎಚ್ ವಿಶ್ವನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಧ್ಯೆ ಒಡಕು ತಂದಿಡುವ ಪ್ರಯತ್ನವನ್ನು ಪಕ್ಷದಲ್ಲಿಯೇ ಕೆಲವರು ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here