ಮಹಾರಾಷ್ಟ್ರದಲ್ಲಿ ಕೊರೊನ ಸೋಂಕಿನಿಂದ ಮೃತಪಟ್ಟ ಮುಸ್ಲಿಂ ವ್ಯಕ್ತಿಯ ಶವವನ್ನು ಖಬರಸ್ತಾನದಲ್ಲಿ ಹೂಳಲು ನಿರಾಕರಿಸಿದ್ದರಿಂದ ಆ ಶವವನ್ನು ಹಿಂದೂ ಚಿತಾಗಾರದಲ್ಲಿ ಸುಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಉಪನಗರ ಮಲಾಡ್‌ನ ನಿವಾಸಿ 65 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಜೋಗೇಶ್ವರಿಯಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಶವವನ್ನು ಹೂಳಲು ಮಲಾಡ್‌ನ ಮಾಲ್‌ವಾಡ್ನಿ ಖಬರಸ್ತಾನಕ್ಕೆ (ಮುಸ್ಲಿಮರ ಸ್ಮಶಾನ) ತೆಗೆದುಕೊಂಡು ಬರಲಾಗಿತ್ತು. ಯಾರಿಗೂ ಮಾಹಿತಿ ನೀಡದೇ ಇಲ್ಲಿಗೆ ಶವವನ್ನು ತಂದಿದ್ದೀರಿ.

ಅದೂ ಅಲ್ಲದೇ ಇದು ಕೊರೊನಾದಿಂದ ಮೃತಪಟ್ಟ ಕೇಸ್‌ ಆಗಿದೆ ಎಂದು ಆಕ್ಷೇಪಿಸಿ ಶವ ಹೂಳಲು ಖಬರಸ್ತಾನದ ಟ್ರಸ್ಟಿಗಳು ನಿರಾಕರಿಸಿದರು. ನಿಯಮಗಳ ಅನುಸಾರ ಪಾಲಿಕೆಯ ಸ್ಥಳೀಯ ವಾರ್ಡ್‌ ಅಧಿಕಾರಿಗಳ ಅನುಮತಿ ಪಡೆದುಕೊಂಡೇ ಬಂದಿದ್ದೇವೆ ಎಂದು ಕುಟುಂಬಸ್ಥರು ವಾದಿಸಿದರೂ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ಒಂದಷ್ಟು ಮಾತಿನ ಚಕಮಕಿಯೂ ನಡೆಯಿತು. ಸ್ಥಳೀಯ ರಾಜಕೀಯ ನಾಯಕರು ಹಾಗೂ ಪೊಲೀಸರ ನೆರವಿನಿಂದ ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನ ನಡೆಸಿದರೂ ಅದು ಈಡೇರಲಿಲ್ಲ.

ಕೊನೆಗೆ ಕೆಲವು ಸಾಮಾಜಿಕ ಕಾರ‍್ಯಕರ್ತರು ಮಧ್ಯಪ್ರವೇಶಿಸಿ ಶವ ದಹನ ಮಾಡಲು ಹತ್ತಿರದ ಹಿಂದೂ ಚಿತಾಗಾರವನ್ನು ಕೋರಿದರು. ಮಾನವೀಯತೆ ದೃಷ್ಟಿಯಿಂದ ಒಪ್ಪುತ್ತಿದ್ದಂತೆಯೇ ಅಂತಿಮವಾಗಿ ಬುಧವಾರ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಯಿತು. ಘಟನಾ ಸ್ಥಳದಲ್ಲಿ ಮೃತ ವ್ಯಕ್ತಿಯ ಮಗ, ಹಿಂದೂಗಳು ತೋರಿದ ಉದಾರತೆಗೆ ಕೃತಜ್ಞತೆ ಸಲ್ಲಿಸಿದ್ದಾನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here