ಪ್ರೇಮ ಎಂಬುದು ಎಲ್ಲಿ ಯಾವಾಗ ಚಿಗುರುತ್ತದೆ ? ಪ್ರೇಮಾಂಕುರ ಯಾರೊಂದಿಗೆ ಆಗುತ್ತದೆ? ಪ್ರೇಮದ ನೋಟ ಯಾರೊಂದಿಗೆ ಬೆರೆಯುತ್ತದೆ? ಪ್ರೇಮದಲ್ಲಿ ಬೀಳುವ ಪ್ರೇಮ ಪಕ್ಷಿಗಳ ಹಾರಾಟ ಎತ್ತ ಸಾಗುವುದು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಪ್ರೇಮದ ಮಾಯೆ ಅದು, ಆದರೆ ಪ್ರೇಮಪಾಶದಲ್ಲಿ ಒಮ್ಮೆ ಸಿಲುಕಿದರೆ ಅದರಿಂದ ಹೊರಬರುವುದು ಬಹಳ ಕಠಿಣ ಹಾಗೂ ಪ್ರೇಮಿಯು ದೂರಾದರೆ ಅದರಿಂದ ಆಗುವ ವಿರಹ ವೇದನೆಯನ್ನು ಒಬ್ಬ ಪ್ರೇಮಿಯೇ ತಿಳಿದಾನು. ಅದಕ್ಕೆ ಕನ್ನಡದ ಹಾಡೊಂದರಲ್ಲಿ ಪ್ರೇಮ ಬರಹ, ಕೋಟಿ ತರಹ ಎಂದು ಹಾಡಲಾಗಿದೆ. ನಾವು ಅನೇಕ ಪ್ರೇಮ ಕಥೆಗಳನ್ನು ಈಗಾಗಲೇ ಚಲನ ಚಿತ್ರಗಳಾಗಿ ನೋಡಿ ಆನಂದಿಸಿದ್ದೇವೆ. ಈಗ ಅದೆಲ್ಲದಕ್ಕಿಂತ ಭಿನ್ನವಾಗಿ, ಯಾವುದೇ ಸಿನಿಮಾದ ಪ್ರೇಮ ಕಥೆಗಿಂತ ಕಡಿಮೆಯಿಲ್ಲ ಎನ್ನ ಬಹುದಾದ ಕಡೆಯ ಒಂದು ನಿಜ ಜೀವನದಲ್ಲಿ ನಡೆದಿದೆ.

ಕೋಲ್ಕತ್ತಾದ ಸರ್ಕಾರಿ ಉದ್ಯೋಗಿಯೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಹುಡುಕಲು ಸುಮಾರು ಆರು ಕಿಲೋಮೀಟರ್ ವ್ಯಾಪ್ತಿಯಲ್ಲಿ 4000 ಪೋಸ್ಟರ್ ಗಳನ್ನು ಅಂಟಿಸಿದ್ದು, ಜೊತೆಗೆ ಸುಮಾರು 7 ನಿಮಿಷಗಳ ವಿಡಿಯೋ ಒಂದನ್ನು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿ ಸುದ್ದಿ ಮಾಡಿದ್ದಾನೆ. ಹಾಗಾದರೆ ಏನಿದು ಈ ಅಮರ ಪ್ರೇಮ ಕಹಾನಿ ಎಂದು ಹೇಳುವುದಾದರೆ, ಬಿಶ್ವಜೀತ್ ಪೊದ್ದರ್ ಎಂಬ 29 ವರ್ಷದ ಸರ್ಕಾರಿ ಕೆಲಸದಲ್ಲಿರುವ ಯುವಕನೇ ಈ ಪ್ರೇಮಿ. ಇನ್ನು ಇವನ ಪ್ರೇಮ ಕಥೆಯ ವಿಚಾರಕ್ಕೆ ಬರುವುದಾದರೆ, ಈತ ಜುಲೈ 23 ರಂದು ಬರ್ಡ್ವಾನ್ ಲೋಕಲ್ ಸ್ಟೇಷನ್ ಯಿಂದ ತಾರಾಪೀಠಕ್ಕೆ ಹೋಗಲು ರೈಲು ಹತ್ತಿದ್ದಾನೆ. ಈತ ಹತ್ತಿದ ಕಂಪಾರ್ಟ್ ಮೆಂಟಿನಲ್ಲೇ ಒಬ್ಬ ಯುವತಿ ಕೂಡಾ ಹತ್ತಿದ್ದಾಳೆ. ಅದೃಷ್ಟವೆಂಬಂತೆ ಆಕೆ ಈತನ ಎದುರಿನ ಸೀಟಿನಲ್ಲೇ ಕುಳಿತಿದ್ದಾಳೆ. ಅಲ್ಲಿ ಶುರುವಾಗಿದೆ ಈತನ ಪ್ರೇಮಕಥೆ.

ಎದುರು ಇದ್ದ ಆ ಹುಡುಗಿಯ ಕಡೆ ಆಕರ್ಷಿತನಾದ ಬಿಶ್ವಜೀತ್ ಆಕೆಯನ್ನು ನೋಡುತ್ತಾ ಕುಳಿತಿದ್ದಾನೆ. ಆದರೆ ಆ ಹುಡುಗಿಗೆ ಅದು ಹಿಡಿಸಲಿಲ್ಲ ಅನ್ನಿಸಿ ಸುಮ್ಮನಾಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಮನಸ್ಸು ತಡೆಯದೆ ಮತ್ತೆ ಅವಳನ್ನು ನೋಡಲು ಆರಂಭಿಸಿದ್ದಾನೆ, ಈ ಬಾರಿ ಹುಡುಗಿಯು ಕೂಡಾ ಬಿಶ್ವಜೀತ್ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಾಳೆ , ಅಲ್ಲದೆ ಮುಗುಳುನಗೆಯ ಹೂಬಾಣವನ್ನು ಇವನತ್ತ ಬಿಟ್ಟಿದ್ದಾಳೆ. ಅಲ್ಲಿಗೆ ಅವನಿಗೆ ಲವ್ ಅಟ್ ಫಸ್ಟ್‌ ಸೈಟ್ ಆಗಿದೆ. ಎರಡು ಗಂಟೆಗಳ ಜರ್ನಿಯಲ್ಲಿ ಇಬ್ಬರು ನೋಟ ನೋಟ ಬೆರೆಸಿದ್ದಾರೆ, ಕಣ್ಣಲ್ಲೇ ಮಾತಾಡಿದ್ದಾರೆ. ಆದರೆ ಹುಡುಗಿ ಪೋಷಕರ ಜೊತೆ ಇದ್ದಿದ್ದರಿಂದ ಮಾತಾಡಲಿಲ್ಲ ಎಂದಿದ್ದಾರೆ ಬಿಶ್ವಜೀತ್. ಅಲ್ಲದೆ ಹುಡುಗಿ ಇಳಿದು ಹೋಗುವಾಗ ಫೋನ್ ನಂಬರ್ ಕೇಳಲು ಪ್ರಯತ್ನಸಿದರೂ ಆಗಲಿಲ್ಲವಂತೆ, ಅಲ್ಲದೆ ಹುಡುಗಿಯು ಏನೋ ಹೇಳಲು ಪ್ರಯತ್ನಿಸಿದಂತೆ ಎನ್ನಿಸಿತಂತೆ.

ಈಗ ಆ ಹುಡುಗಿಯ ಪ್ರೇಮದಲ್ಲಿ ಮುಳುಗೇಳುತ್ತಿರುವ ಬಿಶ್ವಜೀತ್ ಈಗ ಆ ಹುಡುಗಿಯನ್ನು ಹುಡುಕಲು , ತಾನು ಅವಳಿಗಾಗಿ ಕಾಯುತ್ತಾ ಇರುವುದಾಗಿ 4000 ಪೋಸ್ಟರ್ ಗಳನ್ನು ಅಂಟಿಸಿದ್ದಾನೆ, ಮನೆಯವರೆಲ್ಲಾ ಹುಚ್ಚನೆಂದು ಕರೆದರೂ ತಲೆ ಕೆಡಿಸಿಕೊಳ್ಳದೆ ತನ್ನ ಮನದನ್ನೆಯನ್ನು ಹುಡುಕುವ ಪ್ರಯತ್ನ ಮಾಡಿದ್ದಾನೆ. ತಾನು ಅಂದು ಧರಿಸಿದ್ದ ಕೆಂಪು ಟೀ ಶರ್ಟ್ ಧರಿಸಿ, ವಿಡಿಯೋ ಮಾಡಿದ್ದಾನೆ. ಅಲ್ಲದೆ ನಾಲ್ಕು ಸಾವಿರ ಪೋಸ್ಟರ್ ಗಳಲ್ಲಿ ತನ್ನ ಫೋನ್ ನಂಬರ್ ಹಾಗೂ ವಿವರ ನೀಡಿದ್ದಾನೆ. ಅಲ್ಲದೆ ನಾಲ್ಕು ನಿಮಿಷದ ವಿಡಿಯೋಗೆ ಕೊನ್ನಾಗರರ್ ಕೋನೆ ( ಕೊನ್ನಾಗರರ್ ವಧು) ಎಂದು ಹೆಸರಿಟ್ಟಿದ್ದಾನೆ. ಆ ಹುಡುಗಿಗೆ ಕೆಟ್ಟ ಹೆಸರು ತರುವ ಉದ್ದೇಶ ನನಗಿಲ್ಲ, ಕೇವಲ ಪ್ರೇಮ ನಿವೇದನೆ ಮಾಡಲು ಈ ಪ್ರಯತ್ನ ಎಂದಿದ್ದಾನೆ. ಈ ಪ್ರೇಮಿಯ ಪ್ರೇಮ ನಿವೇದನೆ ಆತನ ಆ ಅಪರಿಚಿತ ಹುಡುಗಿಗೆ ತಲುಪುವುದೋ , ಇಲ್ಲವೋ ಕಾಲವೇ ಹೇಳಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here