ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಮಾನಸಿ ಜೋಶಿ, ಭಾರತದ ಮೊಟ್ಟಮೊದಲ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ. ಮೂರು ಬಾರಿ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪಾರುಲ್ ಪರ್ಮರ್ ಅವರನ್ನು 21-12 ಹಾಗೂ 21-7 ನೇರ ಗೇಮಿನಿಂದ ಮಣಿಸಿ, ಮಾನಸಿ ಅವರು ಚಾಂಪಿಯನ್ ಆಗಿದ್ದಾರೆ.

ಈ ಹಿಂದೆ ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದರು. ಈ ಸಿಹಿ ಸುದ್ದಿಯ ಬೆನ್ನಲ್ಲೇ ಈಗ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪಟ್ಟ ಕೂಡ ಭಾರತೀಯ ಆಟಗಾರ್ತಿಯ ಮುಡಿಗೇರಿದೆ. ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ತಂಡ ಒಟ್ಟು 12 ಪದಕಗಳನ್ನು ಗೆದ್ದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಆಟಗಾರರಿಗೂ ಅಭಿನಂದನೆ ತಿಳಿಸಿದ್ದಾರೆ.

ಜೊತೆಗೆ ಮಂಗಳವಾರದಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ವಿಜೇತರಿಗೆ 1.82 ಕೋಟಿ ರೂ. ಬಹುಮಾನದ ಚೆಕ್ ನೀಡಿ ಶುಭಕೋರಿದ್ದರು. ಅದರಲ್ಲಿ ಚಿನ್ನ ಗೆದ್ದ ಆಟಗಾರರಿಗೆ ತಲಾ 20 ಲಕ್ಷ ರೂ. ಬೆಳ್ಳಿ ಗೆದ್ದವರಿಗೆ ತಲಾ 14 ಲಕ್ಷ ಹಾಗೂ ಕಂಚು ಗೆದ್ದವರಿಗೆ ತಲಾ 8 ಲಕ್ಷ ರೂ. ಬಹುಮಾನ ಹಣ ವಿತರಿಸಲಾಗುತ್ತದೆ. ಇದರ ಜೊತೆಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಅವರಿಗೆ 10 ಲಕ್ಷ ರೂ. ಬಹುಮಾನ ನೀಡಿ ಕ್ರೀಡಾ ಸಚಿವರು ಅಭಿನಂದಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here