ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಂದಾರ್ತಿ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಉಡುಪಿಯ ಉತ್ತರ ದಿಕ್ಕಿನಲ್ಲಿ ೨೫ ಕಿ.ಮೀ. ಗಳ ದೂರದಲ್ಲಿರುವ ಮಂದಾರ್ತಿ ಎಂಬ ಗ್ರಾಮದಲ್ಲಿದೆ. ‘ಮಂದ+ಆರತಿ=ಮಂದಾರ್ತಿ, ಅಂದರೆ ದಿವ್ಯವಾದ ಬೆಳಕು ಎಂದರ್ಥದಲ್ಲಿ ಈ ಗ್ರಾಮಕ್ಕೆ ಮಂದಾರ್ತಿ ಎಂಬ ಹೆಸರು ಬಂದಿತೆನ್ನಲಾಗಿದೆ.

ಪುರಾತನಕಾಲದಲ್ಲಿ, ನಾಗಲೋಕದ ದೊರೆಯಾಗಿದ್ದ ಶಂಖಚೋಡನಿಗೆ ದೇವರತಿ, ನಾಗರತಿ, ಚಾರುರತಿ, ಮಂದಾರತಿ ಮತ್ತು ನೀಲಾರತಿ ಎಂಬ ಐದು ಹೆಣ್ಣು ಮಕ್ಕಳಿದ್ದರು. ಈ ಐದೂ ಹೆಣ್ಣುಮಕ್ಕಳು ಶಿವನ ಮಗ ಸುಬ್ರಹ್ಮಣ್ಯಸ್ವಾಮಿಯನ್ನು ವಿವಾಹವಾಗಬೇಕೆಂದು ಇಚ್ಛಿಸಿ, ಕೈಲಾಸಕ್ಕೆ ಹೊರಡುತ್ತಾರೆ. ಮಾರ್ಗಮಧ್ಯದಲ್ಲಿ ಶಿವನ ವಾಹನ ಹಾಗೂ ಪರಮಾಪ್ತ ಭಕ್ತನಾದ ನಂದಿಯು ಈ ಐದು ಹೆಣ್ಣುಮಕ್ಕಳನ್ನು ತಡೆಯುತ್ತಾನೆ. ಮುಂದೇನಾಯಿತೆಂಬುದರ ಬಗ್ಗೆ ಮಾಹಿತಿ ಇಲ್ಲವಾದರೂ, ನಂದಿಯು ಕೋಪಗೊಂಡನೆಂದೂ, ಐದೂ ಹೆಣ್ಣುಮಕ್ಕಳಿಗೆ ಸರ್ಪಗಳಾಗಿ ಜನಿಸಿರೆಂದು ಶಾಪವಿತ್ತನೆಂದೂ ತಿಳಿದುಬರುತ್ತದೆ. ಶಪಿತರಾದ ತಕ್ಷಣದಲ್ಲೇ ಸರ್ಪಗಳಾಗಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಬಿದ್ದು ತೊಂದರೆಗೊಳಗಾಗಿದ್ದ ಈ ಐವರನ್ನು ವ್ಯಾಘ್ರಪಾದರೆಂಬ ಮಹರ್ಷಿಗಳೊಬ್ಬರು ಗಮನಿಸುತ್ತಾರೆ.

ಅವರನ್ನು ದೃಷ್ಟಿಸಿ ನೋಡಿದ ಕೂಡಲೇ ತಮ್ಮ ದಿವ್ಯದೃಷ್ಟಿಯಿಂದ ಸರ್ಪರೂಪದಲ್ಲಿದ್ದ ಹೆಣ್ಣು ಮಕ್ಕಳ ಹಿನ್ನೆಲೆಯನ್ನು ಅರಿತ ಮುನಿವರೇಣ್ಯರು ಅವರ ಬಗ್ಗೆ ಅನುಕಂಪ ತೋರುತ್ತಾರೆ. ಮುನಿಗಳು ಆ ಐವರು ಹೆಣ್ಣುಮಕ್ಕಳಿಗೆ ಸ್ವಾಂತನ ನೀಡುತ್ತಾ “ಅತಿ ಶೀಘ್ರದಲ್ಲೇ ನಿಮ್ಮೆಲ್ಲರಿಗೂ ಒಬ್ಬ ರಾಜಪುರುಷನ ಮೂಲಕ ಶಾಪವಿಮೋಚನೆಯಾಗುತ್ತದೆ,” ಎಂದು ಹೇಳುತ್ತಾರೆ. ಏತನ್ಮಧ್ಯೆ, ಅವಂತೀ ರಾಜ್ಯದ ದೊರೆ ದೇವವರ್ಮನು ಕಾರಣಾಂತರಗಳಿಂದ ಕಾಡುಪಾಲಾಗಿ ಸಹ್ಯಾದ್ರಿ ವನರಾಶಿಯಲ್ಲಿ ಅಲೆಯುತ್ತಿರುತ್ತಾನೆ. ಈತನ ಕಣ್ಣಿಗೆ ಸರ್ಪರೂಪದಲ್ಲಿದ್ದ ರಾಜಕನ್ಯೆಯರು ಬೀಳುತ್ತಾರೆ. ಸರ್ಪಗಳು ಬಹಳ ದೀನಾವಸ್ಥೆಯಲ್ಲಿರುವಂತೆ ಭಾಸವಾಗಿ ಅವುಗಳನ್ನು ರಕ್ಷಿಸುವ ಸಲುವಾಗಿ ಒಂದು ವಸ್ತ್ರದಲ್ಲಿ ಅವುಗಳನ್ನು ಕಟ್ಟಿ, ಹೆಗಲಿನ ಮೇಲಿರಿಸಿಕೊಂಡು ಹೋಗುತ್ತಿರುತ್ತಾನೆ. ಆದರೆ, ಮಾರ್ಗಮಧ್ಯದಲ್ಲಿ ಸರ್ಪಗಳು ವಸ್ತ್ರದ ಕಟ್ಟಿನಿಂದ ಜಾರಿ ಒಂದು ಗೆದ್ದಲ ಹುತ್ತದಲ್ಲಿ ಸೇರಿಕೊಳ್ಳುತ್ತಾರೆ. ಈ ಸರ್ಪಗಳಲ್ಲಿ ಮಂದಾರ್ತಿ ಎಂಬ ಸರ್ಪವೊಂದು ಮಾತ್ರ ಆ ಹುತ್ತದ ಸಮೀಪದಲ್ಲಿದ್ದ ಅರಣ್ಯವೊಂದನ್ನು ಸೇರಿಕೊಂಡು ಅಲ್ಲಿಯೇ ವಾಸಿಸತೊಡಗುತ್ತದೆ.

ಮಂದಾರ್ತಿ ಎಂಬ ಸರ್ಪವು ವಾಸಿಸುತ್ತಿದ್ದ ಕಾರಣ ಈ ಸ್ಥಳವು ಮಂದಾರ್ತಿಯೆಂದೇ ಪ್ರಸಿದ್ಧವಾಯಿತು. ಮತ್ತೊಂದು ಸ್ಥಳಪುರಾಣದ ಪ್ರಕಾರ, ಒಮ್ಮೆ ದೇವವರ್ಮನಿಗೆ ನಾಗಕನ್ಯೆಯೊಬ್ಬಳು ಸ್ವಪ್ನದಲ್ಲಿ ಬಂದು ಹೇಮಾದ್ರಿ ರಾಜ್ಯದ ದೊರೆ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯು ಪ್ರಾಣಾಪಾಯದಲ್ಲಿರುವಳೆಂದೂ, ಆಕೆಯನ್ನು ಕೋಡಲೇ ರಕ್ಷಿಸಬೇಕೆಂದೂ ನುಡಿಯುತ್ತಾಳೆ. ತಕ್ಷಣ ಕಾರ್ಯಪ್ರವೃತ್ತನಾದ ದೇವವರ್ಮನು ಜಲಜಾಕ್ಷಿಯನ್ನು ರಕ್ಷಿಸುತ್ತಾನೆ. ಇದರಿಂದ ಸಂತುಷ್ಟನಾದ ರಾಜಾದಿತ್ಯನು ತನ್ನ ಪುತ್ರಿ ಜಲಜಾಕ್ಷಿಯನ್ನು ದೇವವರ್ಮನಿಗೆ ಧಾರೆಯೆರೆದು ಕೊಟ್ಟು ರಾಜ್ಯವನ್ನೂ ನೀಡುತ್ತಾನೆ. ಒಮ್ಮೆ ಮಹಿಷನೆಂಬೊಬ್ಬ ಅಸುರನು ಜಲಜಾಕ್ಷಿಯನ್ನು ನೋಡಿ ಮೋಹಗೊಳ್ಳುತ್ತಾನೆ. ತನ್ನನ್ನು ವಿವಾಹವಾಗಬೇಕೆಂದು ಆಕೆಯನ್ನು ಒತ್ತಾಯಿಸುತ್ತಾನೆ. ಅಸುರನ ಉಪಟಳವನ್ನು ತಾಳಲಾರದೆ ತನ್ನ ಪತಿಯಲ್ಲಿ ನಡೆದ ಸಂಗತಿಯನ್ನು ವಿವರಿಸುತ್ತಾಳೆ. ಅಸುರನಿಂದ ತಪ್ಪಿಸಿಕೊಳ್ಳುವ ದಾರಿಯು ಕಾಣದಾದಾಗ ದಂಪತಿಗಳು ಸುದೇವ ಮುನಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಮುನಿಗಳು ಜಲಜಾಕ್ಷಿ-ದೇವವರ್ಮರಿಗೆ ಆಶ್ರಯ ನೇಡಿದ ಕಾರಣ, ಮಹಿಷನು ಕೋಪೋದ್ರಿಕ್ತನಾಗಿ, ತನ್ನ ಕಿಂಕರನಾಗಿದ್ದ ಮಹೋದರನನ್ನು ಮುನಿಗಳ ಆಶ್ರಮವನ್ನು ಧ್ವಂಸಮಾಡುವಂತೆ ಆಜ್ಞಾಪಿಸುತ್ತಾನೆ. ಮುನಿಗಳು ತಮ್ಮ ತಪಶ್ಶಕ್ತಿಯಿಂದ ಅಸುರನ ದಾಳಿಯನ್ನು ಎದುರಿಸುತ್ತಾರೆ. ಅಸುರನ ಉಪಟಳ ಹೆಚ್ಚಾದಾಗ ಮುನಿಗಳು ದುರ್ಗಾದೇವಿಯನ್ನು ಪ್ರಾರ್ಥಿಸುತ್ತಾರೆ. ಮುನಿಗಳ ಕರೆಗೆ ಓಗೊಟ್ಟ ದೇವಿಯು ಮುನಿಗಳ ಆಶ್ರಮದ ಮುಂದೆ ಒಂದು ಹುತ್ತವನ್ನು ನಿರ್ಮಿಸುತ್ತಾಳೆ. ಅಸುರ ಪ್ರಯೋಗಿಸಿದ ಎಲ್ಲ ಅಸ್ತ್ರ-ಶಸ್ತ್ರಗಳನ್ನೂ ಹುತ್ತವು ನುಂಗಿಹಾಕುತ್ತದೆ. ಇದರಿಂದ ವಿಚಲಿತನಾದ ಮಹಿಷನು ಸ್ವತಃ ಯುದ್ಧಕ್ಕೆ ಧುಮುಕುತ್ತಾನೆ. ದೇವಿಯು ತನ್ನ ಭೂತಗಣಗಳಾದ ವೀರಭದ್ರ, ಹೈಗುಳಿ, ಕಲ್ಲುಕುಟೆಗ ಮತ್ತು ಬೊಬ್ಬರಾಮರನ್ನು ಅಸುರನ ನಿಗ್ರಹಕ್ಕೆಂದು ನೇಮಿಸುತ್ತಾಳೆ. ಭೂತಗಣಗಳ ಮುಂದೆ ಸೋಲುಂಡ ಮಹಿಷನು ದೇವಿಗೆ ಶರಣಾಗುತ್ತಾನೆ. ಅಲ್ಲದೆ, ಮುಂದೆ ಯಾರು ಕೆಂಡಸೇವೆಯನ್ನು ದೇವಿಯ ಪ್ರೀತ್ಯರ್ಥವಾಗಿ ಕೈಗೊಳ್ಳುತ್ತಾರೋ ಅವರಿಗೆ ಸಕಲ ಸಂಪದಗಳನ್ನಿತ್ತು ಹರಸಬೇಕೆಂದು ಕೇಳಿಕೊಳ್ಳುತ್ತಾನೆ. ದೇವಿಯು “ತಥಾಸ್ತು” ಎಂದು ಹೇಳಲಾಗಿ, ಮಹಿಷನು ಆಕೆಯ ಪದತಲದಲ್ಲಿ ಆಶ್ರಯ ಪಡೆಯುತ್ತಾನೆ. ನಂತರ, ಸುದೇವ ಮತ್ತು ರಾಜದಂಪತಿಗಳು ಮಾಡಿದ ಪೂಜೆ ಮತ್ತು ಪ್ರಾರ್ಥನೆಗಳಿಂದ ಸಂಪ್ರೀತಳಾದ ದೇವಿಯು ಮಂದಾರ್ತಿಯಲ್ಲಿ ತನ್ನ ಪರಿಪೂರ್ಣ ಶಕ್ತಿಯೊಂದಿಗೆ ದುರ್ಗಾಪರಮೇಶ್ವರಿಯಾಗಿ ನೆಲೆಸುವುದಾಗಿ ಹೇಳುತ್ತಾಳೆ. ಹೀಗೆ ಮಂದಾರ್ತಿಯಲ್ಲಿ ನೆಲೆಗೊಂಡ ದುರ್ಗಾಪರಮೇಶ್ವರಿಯು ಭಕ್ತಾದಿಗಳನ್ನು ಸದಾ ರಕ್ಷಿಸುತ್ತಿದ್ದಾಳೆ.ಮುಂದೊಂದು ದಿನ ದೇವವರ್ಮನು, ಶ್ರೀ ಸುಬ್ರಹ್ಮಣ್ಯಸ್ವಾಮಿಯ ಸ್ವಪ್ನದಲ್ಲಿ ಸೂಚಿಸಿದಂತೆ, ವರಾಹಿ ನದಿಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ತೆಗೆದುಕೊಂಡು, ದೇವಸ್ಥಾನವನ್ನು ನಿರ್ಮಿಸುತ್ತಾನೆ.ಅಂದಿನಿಂದ ಈ ಕ್ಷೇತ್ರ ಕಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಜಗತ್ಪ್ರಸಿದ್ಧ ಆಗದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here