ಲೋಕಸಭಾ ಚುನಾವಣೆಯ ಎರಡನೇ ಹಂತವಾದ ಇಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಇಂದು ಒಟ್ಟು 14 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಒಟ್ಟು 2 ಕೋಟಿ 68 ಲಕ್ಷ ಜನರು ಮತ ಚಲಾಯಿಸಿದ್ದು ಶೇ.67.79ರಷ್ಟು ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್​ ಮಾಹಿತಿ ನೀಡಿದ್ದಾರೆ.ಸಂಜೆ 6 ಗಂಟೆಗೆ ಚುನಾವಣೆ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಎರಡು ಕೋಟಿ ಮತದಾರರಿಗೆ ವೋಟರ್​ ಸ್ಲಿಪ್​ ನೀಡಲಾಗಿದೆ. 14 ಕ್ಷೇತ್ರಗಳಿಂದ ಒಟ್ಟು 330 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ 310 ಪುರುಷರು, 20 ಮಹಿಳಾ ಅಭ್ಯರ್ಥಿಗಳು ಇದ್ದರು ಎಂದು ತಿಳಿಸಿದರು.

ಸದ್ಯ ಮಂಡ್ಯದಲ್ಲಿ ಶೇ.80.23ರಷ್ಟು ಮತದಾನವಾಗಿದ್ದು ಕನಿಷ್ಠ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ.49.75 ಆಗಿದೆ. ಆದರೆ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಮತ ಪ್ರಮಾಣ ಅಂತಿಮವಾಗಿಲ್ಲ. ನಾಳೆ ಬೆಳಗ್ಗೆಯಷ್ಟರಲ್ಲಿ ನಿಖರ ಮಾಹಿತಿ ಸಿಗುತ್ತದೆ. 2014ಕ್ಕೆ ಹೋಲಿಸಿದರೆ ತುಂಬ ಸುಧಾರಣೆಯಾಗಿದೆ ಎಂದು ಅವರು ಹೇಳಿದರು.ಎಲ್ಲಿಯೂ ಮತದಾನಕ್ಕೆ ಅಡ್ಡಿಯಾಗಿಲ್ಲ. ಯಾವ ಕ್ಷೇತ್ರದಲ್ಲೂ ಮರುಮತದಾನವಿಲ್ಲ. ಬಹಳಷ್ಟು ಯುವಕರು ಮೊದಲಬಾರಿಗೆ ಮತ ಚಲಾಯಿಸಿದ್ದಾರೆ.

ಇವಿಎಂ ವಿವಿಪ್ಯಾಟ್​ ಬಳಕೆ ಯಶಸ್ವಿಯಾಗಿದೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಮತದಾನದ ಪ್ರಮಾಣ ಕಳೆದಬಾರಿಗಿಂತ ಜಾಸ್ತಿಯಾಗಿದೆ. ದಕ್ಷಿಣ ಕನ್ನಡ, ತುಮಕೂರಲ್ಲೂ ಪ್ರತಿಶತ ಹೆಚ್ಚಳವಾಗಿದೆ. ಮಂಡ್ಯದಲ್ಲಿ ಶೇ.9ರಷ್ಟು, ಮೈಸೂರಲ್ಲಿ ಶೇ. 1ರಷ್ಟು ಮತದಾನದ ಪ್ರಮಾಣ ಹೆಚ್ಚಾಗಿದೆ ಎಂದು ವಿವರಿಸಿದರು.
14 ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೀಗಿದೆ..
ತುಮಕೂರು: 77.01%, ಮಂಡ್ಯ – 80.23%, ಮೈಸೂರು – 68.72%, ಚಾಮರಾಜನಗರ – 73.45%, ಬೆಂಗಳೂರು ಗ್ರಾಮಾಂತರ – 64.09%, ಬೆಂಗಳೂರು ಉತ್ತರ – 50.51%, ಬೆಂಗಳೂರು ಕೇಂದ್ರ 49.75%, ಬೆಂಗಳೂರು ದಕ್ಷಿಣ-54.12%, ಚಿಕ್ಕಬಳ್ಳಾಪುರ- 76.14%, ಕೋಲಾರ- 75.94%, ಉಡುಪಿ-ಚಿಕ್ಕಮಗಳೂರು- 75.26%, ಹಾಸನ- 77.28%, ದಕ್ಷಿಣ ಕನ್ನಡ- 77.7%, ಚಿತ್ರದುರ್ಗ- 70.59% ಮತದಾನ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here