ಮಂಡ್ಯ,ಸೆ.22: ತಮಿಳುನಾಡಿಗೆ ನೀರು ಹರಿಸಬೇಕೆಂಬ ಪ್ರಾಧಿಕಾರದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುತ್ತಿದ್ದಂತೆ ಆಕ್ರೋಶಗೊಂಡಿರುವ ರೈತರು, ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ನಾಳೆ ಮಂಡ್ಯ ಬಂದ್ಗೆ ಕರೆ ಕೊಡಲಾಗಿದೆ.
ಬೆಂಗಳೂರಿಗೆ ನೀರು ಸರಬರಾಜಾಗುವ ತೊರೆಕಾಡನಹಳ್ಳಿ ಪಂಪ್ಹೌಸ್ಗೆ ರೈತ ಸಂಘಟನೆಗಳ ಸದಸ್ಯರು, ಕನ್ನಡ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬೆಂಗಳೂರಿಗರು ಕಾವೇರಿ ಪರ ಪ್ರತಿಭಟನೆ ಮುಂದಾಗದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನೀರು ಹರಿಸಲು ಪ್ರಾಧಿಕಾರದ ಆದೇಶ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡುತ್ತಿದ್ದಂತೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿವಿಧ ಸಂಘಟನೆಗಳ ಪ್ರತಿಭಟನೆಯ ಆಕ್ರೋಶ ಭುಗಿಲೆದ್ದಿದೆ.
ಮಂಡ್ಯ ಜಿಲ್ಲಾ ರಹಿತ ಹಿತರಕ್ಷಣಾ ಸಮಿತಿ ಸದಸ್ಯರು ನಾಳೆ ಮಂಡ್ಯ ಜಿಲ್ಲಾ ಬಂದ್ಗೆ ಕರೆ ಕೊಟ್ಟಿದ್ದು, ಮಂಡ್ಯ ಬಂದ್ನಲ್ಲಿ ಸ್ಥಳೀಯ ರೈತ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಭಾಗಿಯಾಗಲಿದ್ದಾರೆ.
ನಾಡಿನ ರೈತರ ಹಿತಾಸಕ್ತಿಗಾಗಿ ಕರೆ ಕೊಟ್ಟಿರುವ ಬಂದ್ನಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಬೇಕೆಂದು ರೈತ ಹಿತರಕ್ಷಣಾ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ. ಮಳೆಯಿಲ್ಲದೆ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಬೆಳೆಗಳಿಗೆ ನೀರಿಲ್ಲ. ಕುಡಿಯುವ ನೀರಿಗೂ ತಾತ್ವಾರ ಎದುರಾಗುವ ಸಂಭವವಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನ್ಯಾಯಾಲಯದ ಆದೇಶ ಬರಸಿಡಿಲು ಬಂದೆರಗಿದಂತಾಗಿದೆ. ಕಠಿಣ ನಿಲುವು ಕೈಗೊಳ್ಳುವ ಮೂಲಕ ರಾಜ್ಯದ ರೈತರ ಪರ ನಿಲ್ಲಬೇಕೆಂದು ಹೋರಾಟಗಾರರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು, ವಿವಿಧ ನಾಗರಿಕ ಸಂಘಟನೆಗಳು ತುರ್ತು ಸಭೆ ನಡೆಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾವೇರಿ ಹೋರಾಟಕ್ಕೆ ಮುಂದಾಗಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.