ಲೋಕಸಭಾ ಚುನಾವಣಾ ಫಲಿತಾಂಶ ಬಂದಾಗಿದೆ, ಬಿಜೆಪಿ ದೇಶಾದ್ಯಂತ ತನ್ನ ವಿಜಯದ ಪತಾಕೆಯನ್ನು ಹಾರಿಸಿದ್ದು ಆಗಿದೆ. ಘಟಾನುಘಟಿಗಳು, ಮಾತಿನ ಮೂಲಕವೇ ಇತರರ ಚಾರಿತ್ರ್ಯ ವಧೆ ಮಾಡಿದವರೆಲ್ಲಾ ಮೂಲೆಗುಂಪಾಗಿದ್ದಾರೆ. ಇದೆಲ್ಲದರ ನಡುವೆ ಎಲ್ಲರ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯ ನಡುವೆಯೂ ಜೆಡಿಎಸ್ ನ ಭದ್ರಕೋಟೆಯನ್ನು ಒಡೆದು ಪಕ್ಷೇತರ ಅಭ್ಯರ್ಥಿಯಾದ ಸುಮಲತ ಅವರು ಜಯದ ನಗೆಯನ್ನು ಬೀರಿದ್ದಾರೆ. ಆದರೆ ಇದೆಲ್ಲದರ ನಡುವೆ ಇನ್ನೊಂದು ವಿಷಯವನ್ನು ಗಮನಿಸಬೇಕು. ಅದೇನೆಂದರೆ ಮಂಡ್ಯದಲ್ಲಿ ಸುಮಲತ ಅವರನ್ನು ಸೋಲಿಸಲು ರೂಪಿಸಿದ ರಣತಂತ್ರದಲ್ಲಿ ಅವರದೇ ಹೆಸರಿನ ಮೂರು ಜನ ಸುಮಲತ ರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿತ್ತು.

ಇವಿಎಂ ನಲ್ಲಿ ಕ್ರಮಸಂಖ್ಯೆ 19 ರಲ್ಲಿ ಒಬ್ಬ ಸುಮಲತ, 21 ರಲ್ಲಿ ಎಂ. ಸುಮಲತಾ ಹಾಗೂ ಸಂಖ್ಯೆ 22 ರಲ್ಲಿ ಕೂಡಾ ಮತ್ತೊಬ್ಬ ಸುಮಲತ ಎನ್ನುವವರು ಇದ್ದರು. ಈ ಮೂವರಿಗೆ ಚುನಾವಣೆಯಲ್ಲಿ ಯಾವ ಪ್ರಮಾಣದಲ್ಲಿ ಮತದಾನ ನಡೆದಿದೆ ಅಥವಾ ಎಷ್ಟೆಷ್ಟು ಮತಗಳನ್ನು ಇವರು ಪಡೆದಿದ್ದಾರೆ ಎಂಬುದನ್ನು ಕೂಡಾ ನಾವು ತಿಳಿಯಬೇಕಿದೆ. ಏಕೆಂದರೆ ರೂಪಿಸಿದ ತಂತ್ರ ವಿಫಲವಾಗಿ ಸುಮಲತ ಅವರು ಭರ್ಜರಿ ಗೆಲುವನ್ನು ಈಗಾಗಲೇ ಪಡೆದಿದ್ದಾರೆ. ಹಾಗಾದರೆ ಬನ್ನಿ ಈ ಸುಮಲತೆಯರಿಗೆ ಬಿದ್ದ ಮತಗಳೆಷ್ಟು ಎಂದು ನೋಡೋಣ.

ಕ್ರಮಸಂಖ್ಯೆ 19 ರ ಸುಮಲತ ಅವರಿಗೆ 8902 ಮತಗಳು, ಕ್ರಮ ಸಂಖ್ಯೆ 21 ರ ಸುಮಲತಾ ರಿಗೆ 8542 ಮತಗಳು ಹಾಗೂ ಮತ್ತೊಬ್ಬ ಅಂದರೆ ಕ್ರಮ ಸಂಖ್ಯೆ 22 ರ ಸುಮಲತಾಗೆ 3119 ಮತಗಳು ಬಂದಿವೆ. ಇನ್ನು ಅಸಲಿ ಸುಮಲತ ಅಂಬರೀಶ್ ಅವರಿಗೆ 703660 ಮತಗಳು ಬಂದಿವೆ. ಒಟ್ಟಾರೆ ನಕಲಿ ಸುಮಲತ ಹೆಸರಿನ ತಂತ್ರ ಅಸಲಿ ಸುಮಲತಾ ಅಂಬರೀಶ್ ಅವರ ಗೆಲುವಿನ ಓಟಕ್ಕೆ ಯಾವುದೇ ತಡೆಯಾಗಲಿಲ್ಲ ಎಂಬುದು ನಿಜವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here