ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ ಟಿ ರವಿ ಅವರು ಹೇಳಿದ ನಾಡಧ್ವಜದ ಹೇಳಿಕೆಗೆ ಸ್ವತಃ ಬಿಜೆಪಿ ಅವರಿಂದ ಸೇರಿದಂತೆ ಕನ್ನಡಿಗರಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿ ಟಿ ರವಿ ವಿರುದ್ಧ ತಿರುಗಿಬಿದ್ದಿರುವ ಕನ್ನಡಿಗರು ನಮ್ಮ ಧ್ವಜ ನಮ್ಮ ಹೆಮ್ಮೆ ಎಂಬ ಆಂದೋಲನ ಆರಂಭಿಸಿದ್ದಾರೆ. ಕರ್ನಾಟಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ, ನಮಗೆ ರಾಷ್ಟ್ರ ಧ್ವಜವೇ ಒಂದೇ ಸಾಕು ಎನ್ನುವ ಸಚಿವ ಸಿ.ಟಿ. ರವಿ ಹೇಳಿಕೆ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದೆ. ಸಚಿವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಿಟಿ ರವಿ ಹೇಳಿಕೆ ವಿರೋಧಿಸಿ ಆಂದೋಲನ ಆರಂಭಗೊಂಡಿದೆ. ಬಾವುಟದ ವಿಚಾರವಾಗಿ ನಿನ್ನೆ ಮಾತನಾಡಿದ್ದ ರವಿ, “ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ,” ಎಂದು ಹೇಳುವ ಮೂಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆ ಕೈಬಿಟ್ಟಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಅನೇಕರು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

“ಕನ್ನಡ ಬಾವುಟದ ಹಿರಿಮೆ ಗೊತ್ತಿಲ್ಲದ ಜನಪ್ರತಿನಿಧಿಗಳು ಯಾರೇ ಇರಲಿ ರಾಜ್ಯ ಬಿಟ್ಟು ತೊಲಗಲಿ,” ಎಂದು ಕೆಲವರು ಹೇಳಿದ್ದಾರೆ. “ನೆಲ ಜಲಗಡಿ ಭಾಷೆ ಇವುಗಳ ಮೇಲೆ ಸ್ವಾಭಿಮಾನ ಇಲ್ಲದ ಬಿಜೆಪಿಯವರು ಮಾತ್ರ ಕನ್ನಡದ ಅಸ್ಮಿತೆಗೆ ಕನ್ನಡದ ಧ್ವಜಕ್ಕೆ ಅವಮಾನ ಮಾಡುವ ಆಲೋಚನೆ ಮಾಡಲು ಸಾಧ್ಯ. ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿಯ ಪ್ರತೀಕವು ನಮ್ಮ ಕನ್ನಡದ ಬಾವುಟ,” ಎಂದು  ಕನ್ನಡಿಗರು  ಟ್ವೀಟ್​ ಮಾಡಿದ್ದಾರೆ.ಅಷ್ಟೇ ಅಲ್ಲದೆ ರಾಜಕಾರಣಿಗಳು ಮತ್ತು ಸಿನಿಮಾ ನಟರು ಸಹ ಸಿ ಟಿ ರವಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here