ಸಾಮಾನ್ಯವಾಗಿ ದೇವಳಗಳಲ್ಲಿ ಗರ್ಭಗುಡಿಯಲ್ಲಿರುವ ದೇವರನ್ನು ಅರ್ಚಕರು ಅಲಂಕರಿಸಿ, ವೇದ ಮಂತ್ರಗಳ ಉಚ್ಛಾರಣೆಯೊಂದಿಗೆ ಪೂಜೆ ಮಾಡಿದರೆ, ಜನರೆಲ್ಲಾ ಗರ್ಭಗುಡಿಯ ಹೊರಗೆ ನಿಂತು ದಿವ್ಯ ಮಂಗಳ ಸ್ವರೂಪಿಯಾದ ದೇವನ ವಿಗ್ರಹವನ್ನು ನೋಡಿ ಕಣ್ತುಂಬಿ ಕೊಳ್ಳತ್ತಾರೆ. ಆದರೆ ಭಾರತದ ಒಂದು ದೇವಾಲಯದಲ್ಲಿ ಆಲಯ ಅರ್ಚಕರಿಗೇ ದೇವರನ್ನು ನೋಡುವ ಭಾಗ್ಯ ಇಲ್ಲ ಎಂದರೆ ಸೋಜಿಗ, ಆಶ್ಚರ್ಯ ಹಾಗೂ ಅದ್ಭುತ ಎನಿಸಬಹುದು. ನಿಜಕ್ಕೂ ಅಂತಹ ಒಂದು ಆಲಯ ನಮ್ಮ ಭಾರತದಲ್ಲಿ ಇರುವುದು ಅಕ್ಷರಶಃ ಸತ್ಯ. ಅಂದ ಮೇಲೆ ಆ ದೇವಾಲಯ ಎಲ್ಲಿದೆ? ಏನಿದರ ಹಿಂದಿನ ಮರ್ಮ ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ, ದೇವಾಲ್ ಬ್ಲಾಕ್ ನಲ್ಲಿದೆ ಈ ದೇವಾಲಯ. ಇದನ್ನು ಲಾಠೂ ದೇವತೇ ಮಂದಿರ ಎಂದು ಕರೆಯಲಾಗಿದೆ. ಲಾಠೂ ದೇವತೆ ನಂದಾ ದೇವಿಯ ಸಹೋದರ ಎಂದು ನಂಬಲಾಗಿದ್ದು, ನಂದಾ ದೇವಿ ಯಾತ್ರೆ ಮಾಡುವಾಗ ಹನ್ನೆರಡನೇ ಹಂತದಲ್ಲಿ ಈ ದೇಗುಲ ಸಿಗುತ್ತದೆ. ಈ ಮಂದಿರದ ವಿಶೇಷತೆಯೇನೆಂದರೆ ಈ ಆಲಯದಲ್ಲಿರುವ ದೇವರನ್ನು ಇದುವರೆವಿಗೂ ಯಾರೂ ನೋಡೇ ಇಲ್ಲ. ಆಲಯ ಅರ್ಚಕರು ಕೂಡಾ ತಾವು ಪೂಜಿಸುವ ದೇವರನ್ನು ನೋಡಿಲ್ಲ ಎಂದರೆ ನಿಜಕ್ಕೂ ಇದು ಆಶ್ಚರ್ಯವೇ ಅಲ್ಲವೇ?

ಇಲ್ಲಿನ ಹಿರಿಯರ ಪ್ರಕಾರ ಆಲಯದಲ್ಲಿ ಇರುವ ದೇವರನ್ನು ಯಾರಾದರೂ ನೋಡಿದರೆ ಅವರು ದೃಷ್ಟಿ ಹೀನರಾಗಿ ಹೋಗುವರಂತೆ. ಇನ್ನು ಈ ಆಲಯ ವೈಶಾಖ ಮಾಸದ ಹುಣ್ಣಿಮೆಯ ದಿನ ಅಂದರೆ ವರ್ಷಕ್ಕೊಮ್ಮೆ ಮಾತ್ರ ತೆರೆಯಲ್ಪಡುತ್ತದೆ. ಹಾಗೆ ತೆರೆದ ದಿನ ಆಲಯದ ಅರ್ಚಕರು ತಮ್ಮ ಕಣ್ಣಿಗೆ, ಮೂಗಿಗೆ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು, ಆಲಯದೊಳಗೆ ಹೋಗಿ ಪೂಜೆ ಮಾಡಬೇಕು.‌ ಈ ಸಂದರ್ಭದಲ್ಲಿ ಆಲಯದ ಹತ್ತಿರ ವಿಷ್ಣು ಸಹಸ್ರ ನಾಮ ಹಾಗೂ ಭಗವತಿ ಚಂಡಿಕೆಯ ನಾಮಸ್ಮರಣೆಯನ್ನು ಆಯೋಜಿಸಲಾಗುತ್ತದೆ. ಇನ್ನು ಭಕ್ತರಿಗೆ ಆಲಯದೊಳಗೆ ಪ್ರವೇಶವಿಲ್ಲ. ಎಲ್ಲರೂ ದೂರದಿಂದಲೇ ನಿಂತು ಆಲಯದ ದರ್ಶನವನ್ನು ಮಾಡಬೇಕು.

ಈ ಆಲಯದಲ್ಲಿ ನೆಲೆಸಿರುವ ದೇವನಾದರೂ ಯಾರು? ಯಾವ ದೇವನನ್ನು ಇಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಅರ್ಚಕರು ಪೂಜಿಸುತ್ತಾರೆ ಎನ್ನುವುದಾದರೆ, ಈ ಆಲಯದಲ್ಲಿ ಸಾಕ್ಷಾತ್ ನಾಗರಾಜನು, ನಾಗ ಮಣಿ ಸಹಿತ ವಿರಾಜಮಾನನಾಗಿದ್ದಾನೆ ಎಂದು ಹೇಳಲಾಗಿದೆ. ಆದ್ದರಿಂದಲೇ ಆ ನಾಗಮಣಿಯ ಅಪರಿಮಿತ ಪ್ರಕಾಶವನ್ನು ಸಾಮಾನ್ಯರು ತಮ್ಮ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂಬುದು ಇಲ್ಲಿನ ನಂಬಿಕೆ. ಆಲಯದೊಳಗೆ ನಾಗರಾಜನು ವಿಶಾಲ ರೂಪದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ.

ಭಕ್ತರು ಆಲಯದೊಳಗೆ ಪ್ರವೇಶಿಸಿ ನಾಗರಾಜನ ವಿಶಾಲಕಾಯವನ್ನು ನೋಡಿ ಭಯಭೀತರಾಗಬಾರದು ಹಾಗೂ ನಾಗಮಣೆಯ ಕಾಂತಿಗೆ ದೃಷ್ಟಿ ಹೀನರಾಗಬಹುದೆಂಬ ಭಯದಿಂದ ಯಾರನ್ನೂ ಆಲಯದೊಳಕ್ಕೆ ಬಿಡುವುದಿಲ್ಲ. ಪೂಜಾರಿಯು ಮೂಗು ಹಾಗೂ ಬಾಯಿಗೆ ಕಪ್ಪು ವಸ್ತ್ರ ಕಟ್ಟಿ ಪೂಜೆ ಮಾಡುತ್ತಾರೆ. ಏಕೆಂದರೆ ಅವನ ಉಸಿರಾಟ ನಾಗರಾಜನಿಗೆ ಸೋಕಬಾರದು ಹಾಗೂ ಅದೇ ರೀತಿ ನಾಗರಾಜನ ವಿಷಪೂರಿತ ಉಸಿರು ಅರ್ಚಕನ ದೇಹ ಸೇರದಿರಲಿ ಎಂದು. ಭಕ್ತರಿಗೆ ಆಲಯದೊಳಗೆ ಪ್ರವೇಶವಿಲ್ಲವಾದರೂ, ಶ್ರದ್ಧಾಳುಗಳು ಆಲಯದ ಹೊರಗೆ ನಿಂತು ದೇವಾಲಯಕ್ಕೆ ಭಕ್ತಿಯಿಂದ ಕೈ ಮುಗಿಯಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here