ನಡೆದಾಡುವ ದೇವರು ಇನ್ನು ಇಲ್ಲ ಎಂಬ ಸುದ್ದಿ ಹೊರಬರುತ್ತಿದ್ದಂತೇ ಸಿದ್ದಗಂಗಾ ಮಠದಲ್ಲಿ ನೀರವ ಮೌನ ಆವರಿಸುವ ಬದಲು ಅಲ್ಲಿನ ಮಕ್ಕಳ ಅಳುವ ಶಬ್ಧ ಮುಗಿಲು ಮುಟ್ಟಿದೆ. ನಡೆದಾಡುವ ದೇವರನ್ನು ಪ್ರತಿದಿನ ಕಣ್ಣುತುಂಬಿಕೊಂಡು ಖುಷಿ ಪಡುತ್ತಿದ್ದ ಅಲ್ಲಿನ ವಿದ್ಯಾರ್ಥಿಗಳು ಇಂದು ನಡೆದಾಡುವ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಬರುತ್ತಿದ್ದಂತೇ ಬಿಕ್ಕಿ ಬಿಕ್ಕಿ‌ ಅಳುತ್ತಿದ್ದರು. ಆ ಮಕ್ಕಳ ದೃಶ್ಯ ಕಂಡವರ ಕಣ್ಣಲ್ಲಿ ಸಹ ನೀರು ಜಿನುಗುತ್ತಿತ್ತು. ನಾಡಿನ ನಡೆದಾಡುವ ದೇವರು ಇನ್ನಿಲ್ಲ ಎಂಬ ವಿಷಯ ಇಡೀ ನಾಡಿನ ಜನಕ್ಕೆ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ. ಇಡೀ ನಾಡಿಗೆ ನಾಡೇ ಕಣ್ಣೀರು ಸುರಿಸುವಂತಾಗಿದೆ. ನಾಡಿನ ಆಧ್ಯಾತ್ಮಿಕ ಜ್ಯೋತಿ ಅವರು. ಅವರು ಕೇವಲ ಮಹಾಗುರುಗಳಲ್ಲ , ಲಕ್ಷಾಂತರ ಜನರ ಜೀವನ ರೂಪಿಸಿದ ವಿಶ್ವ ಗುರು ಅವರು. ಮಾನವ ಸೇವೆ ಮಾಧವ ಸೇವೆ, ವಿದ್ಯಾ ದಾನ ಪರಮ ಶ್ರೇಷ್ಠ ದಾನ, ಅನ್ನ ದಾನ ಜೀವದಾನ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಶತಾಯುಷಿ, ಶತಮಾನದ ಮಾನವ, ವಿಶ್ವಮಾನವ ಹಾಗೂ ದಿವ್ಯ ಚೇತನ. ಕರ್ನಾಟಕದ ಚೈತನ್ಯ ಶಕ್ತಿ. ನಾಡಿನ ಜನರ ನರ ನಾಡಿಗಳಲ್ಲಿ ತನ್ನ ಸರಳತೆಯಿಂದಲೇ ಸಂಚಲನ ಮೂಡಿಸುವ ದೇವ ಮಾನವ.

ಅವರಿಲ್ಲ ಎಂದರೆ ಅದು ಕೇವಲ ದೈಹಿಕವಾಗಿಯಷ್ಟೇ. ಅವರು ನಿರ್ಮಾಣ ಮಾಡಿದ ಸಿದ್ಧಗಂಗಾ ಮಠ, ನೀಡಿದ ವಿದ್ಯಾದಾನ, ರೂಪಿಸಿದ ಜೀವನಗಳು ಇವೆಲ್ಲಾ ಈ ಮಹಾ ಚೇತನರ ಔನತ್ಯವನ್ನು ಜಗತ್ತಿಗೆ ಸಾರುತ್ತಿದೆ ಅಂದ ಮೇಲೆ ಅಂತಹ ದೈವೀ ವ್ಯಕ್ತಿಯು ದೈಹಿಕವಾಗಿ ದೂರವಾದರೂ, ಮಾನಸಿಕವಾಗಿ ಸದಾ ಅಮರ, ಚಿರಂಜೀವಿ. ಶ್ರೀ ಶಿವಕುಮಾರ ಸ್ವಾಮಿಗಳು ಎನ್ನುವ ಅವರ ನಾಮ ಸ್ಮರಣೆಯೇ ಜೀವನವನ್ನು ಪಾವನಗೊಳಿಸುತ್ತದೆ ಅಂದ ಮೇಲೆ ಅವರು ಓಡಾಡಿದ, ಪಾವನ ಭೂಮಿಯಲ್ಲಿ ಅವರ ನೆನಪುಗಳು ಮರೆಯಾಗುವುದು ಅಸಂಭವ. ಅವರ ಜೀವನ ಅದೊಂದು ಮಹೋನ್ನತ ಗ್ರಂಥ.

ಶ್ರೀ ಶಿವಕುಮಾರ ಸ್ವಾಮಿಗಳ ಕೃಪಾ ಕಟಾಕ್ಷದಲ್ಲಿ ವಿದ್ಯಾ ದಾನ ಪಡೆದಿರುವ ಸಾವಿರಾರು ಜನರ ಜೀವನ ರೂಪಿಸಿದ ಈ ಮಹಾನ್ ಪುರುಷನ ಜೀವನ ನಿಜಕ್ಕೂ ಧನ್ಯ. ನಾಡಿನ ಪ್ರತಿಯೊಬ್ಬ ನಾಯಕರಿಗೂ ಇವರು ಮಾರ್ಗದರ್ಶನ ನೀಡಿದವರು. ಇಡೀ ದೇಶದಲ್ಲಿ ‌ಶಿವಕುಮಾರ ಸ್ವಾಮಿಗಳು ಮಾಡಿದಂತಹ ವಿದ್ಯಾ ದಾನ ಹಾಗೂ ಅನ್ನ ದಾನ ಮಾಡಿದ ಸಂಸ್ಥೆ ಮತ್ತೊಂದಿಲ್ಲ. ದೇಶದ ಮುಂದೊಂದು ಉನ್ನತವಾದ ಇತಿಹಾಸವನ್ನೇ ಅವರು ಬಿಟ್ಟು ಹೋಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here