ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧನೆ ಮೆರೆದಿರುವ ಆಮ್ ಆದ್ಮಿ ಪಾರ್ಟಿಯ ನಾಯಕ ಅರವಿಂದ್ ಕೇಜ್ರಿವಾಲ್ ಭಾನುವಾರ ಸತತ ೩ನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆಯೇರಲಿದ್ದಾರೆ. ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕಾಗಿ ಭರದ ಸಿದ್ಧತೆ ನಡೆದಿದ್ದು ಅಪಾರ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆ.
ಆಪ್ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ವಿಷಯ ಪ್ರಕಟಿಸಿದರು. ಫೆ.೧೬ ರಂದು ಬೆಳಿಗ್ಗೆ ೧೦ ಗಂಟೆಗೆ ಕೇಜ್ರಿವಾಲ್ ಸಚಿವ ಸಂಪುಟದ ಮಂತ್ರಿಗಳೂ ಪ್ರತಿಜ್ಞಾ ವಿಧಿ ಸ್ವೀಕರಿಸುವರೆಂದು ಅವರು ತಿಳಿಸಿದರು. ಈ ಅಭೂತಪೂರ್ವ ಸಮಾರಂಭದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ದೆಹಲಿ ಮತದಾರರು ಕಾಯಕ ರಾಜಕಾರಣವನ್ನು ಗೌರವಿಸಿ ಬಿಜೆಪಿಯ ದ್ವೇಷ ರಾಜಕಾರಣವನ್ನು ತಿರಸ್ಕರಿಸಿದ್ದಾರೆಂದು ಸಿಸೋಡಿಯಾ ಬಣ್ಣಿಸಿದರು. ಶಾಹೀನ್‌ಬಾಗ್ ಮತ್ತು ಪೌರತ್ವ ಕಾಯ್ದೆ ವಿವಾದ ಸುತ್ತ ಪ್ರಚಾರ ಕೇಂದ್ರೀಕರಿಸಿದ್ದ ಬಿಜೆಪಿ ಕಾರ್ಯತಂತ್ರಕ್ಕೆ ಪ್ರತಿಯಾಗಿ ಅರವಿಂದ್ ಕೇಜ್ರಿವಾಲ್‌ರ ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡಿ ಜನಮೆಚ್ಚುಗೆ ಗಳಿಸಿದ್ದಾರೆಂದು ಅವರು ವಿವರಿಸಿದರು.
ನೂತನವಾಗಿ ಚುನಾಯಿತರಾದ ಆಪ್ ಶಾಸಕರು ಬುಧವಾರ ಬೆಳಿಗ್ಗೆ ಸಭೆ ಸೇರಿ ಕೇಜ್ರಿವಾಲ್‌ರನ್ನು ಶಾಸಕಾಂಗ ಪಕ್ಷದ ಹೊಸ ನಾಯಕರಾಗಿ ಆಯ್ಕೆ ಮಾಡಿದರು. ಅದಾದ ಬಳಿಕ ಕೇಜ್ರಿವಾಲ್ ದೆಹಲಿ ಲೆ.ಗೌರ‍್ನರ್ ಅನಿಲ್ ಬೈಜಲ್‌ರನ್ನು ಭೇಟಿಯಾಗಿ ನೂತನ ಸರ್ಕಾರ ರಚನೆ ಕುರಿತು ಸಮಾಲೋಚಿಸಿದರು. ಕೇಜ್ರಿವಾಲ್ ಔಪಚಾರಿಕ ಪದ್ಧತಿಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ.

ಆಪ್ ಕಾರ್ಯಕರ್ತ ಗುಂಡಿಗೆ ಬಲಿ
ಚುನಾವಣಾ ವಿಜಯದ ಬಳಿಕ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸಾಗುತ್ತಿದ್ದ ಆಪ್ ಶಾಸಕ ನರೇಶ್ ಯಾದವ್ ಜೊತೆ ವಾಹನದಲ್ಲಿ ಬರುತ್ತಿದ್ದ ಪಕ್ಷದ ಕಾರ್ಯಕರ್ತ ಅಶೋಕ್ ಮಾನ್ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಮಂಗಳವಾರ ರಾತ್ರಿ ನಡೆದ ಈ ಘಟನೆ ಸಂಬಂಧ ಧರ್ಮೇಂದರ್ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ವರ್ಷ ದೀಪಾವಳಿ ವೇಳೆ ನಡೆದಿದ್ದ ಘರ್ಷಣೆಯ ಹಿನ್ನೆಲೆಯಲ್ಲಿ ಆರೋಪಿ ಸೇಡಿನ ಕ್ರಮವಾಗಿ ಮಾನ್ ಗುರಿಯಾಗಿಸಿಕೊಂಡು ಈ ಕೃತ್ಯ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಕಾರ್ಯಕರ್ತ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿದ್ದಾನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here