ಕೊರೊನಾ ಸಾಂಕ್ರಾಮಿಕ ಸವಾಲನ್ನು ಸಮರ್ಥವಾಗಿ ಎದುರಿಸುತ್ತಾ ಬಂದಿರುವ ಪ್ರಧಾನಿ ಮೋದಿ ಇದೀಗ ವಿಶ್ವ ನಾಯಕರ ಸಾಲಿನಲ್ಲಿ ಅಗ್ರಮನ್ನಣೆಗೆ ಪಾತ್ರರಾಗಿದ್ದಾರೆ. ಜನಪ್ರಿಯತೆಯ ಮಾಪನದಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ನಾಯಕ ಪುಟಿನ್‌ಗಿಂತ ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದ್ದಾರೆ.

ಕೊರೊನಾ ಹಾವಳಿ ಆರಂಭವಾಗುವ ಮುನ್ನ ಪೌರತ್ವ ಶಾಸನ ವಿವಾದದ ಕಾರಣ ದೇಶದಲ್ಲಿ ಗಂಭೀರ ಬಿಕ್ಕಟ್ಟು ತಲೆದೋರಿತ್ತು. ಟ್ರಂಪ್ ಭಾರತ ಪ್ರವಾಸದ ವೇಳೆಯೂ ರಾಜಧಾನಿ ದೆಹಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದು ಆತಂಕದ ಸನ್ನಿವೇಶ ಉಂಟಾಗಿತ್ತು. ಇದರ ಜೊತೆಗೆ ಆರ್ಥಿಕ ಹಿನ್ನಡೆಯೂ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿತ್ತು.

ಇಷ್ಟೆಲ್ಲಾ ಆದರೂ ಚೀನಾ ಮೂಲದ ವೈರಾಣು ಸೋಂಕು ದೇಶದ ಜನರ ಭವಿಷ್ಯಕ್ಕೆ ಮಾರಕವಾಗಿ ಕಾಡತೊಡಗಿದಾಗ ನರೇಂದ್ರ ಮೋದಿ ದಿಟ್ಟತನದ ನಾಯಕತ್ವ ಪ್ರದರ್ಶಿಸಿ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಲಾಕ್‌ಡೌನ್ ಕಾರ್ಯತಂತ್ರದ ಪರಿಣಾಮಕಾರಿ ಬಳಕೆಯ ಮೂಲಕ ೧೩೦ ಕೋಟಿ ಜನಸಂಖ್ಯೆಯುಳ್ಳ ಭಾರತ ದೇಶದ ಪ್ರತಿರೋಧ ಶಕ್ತಿಯನ್ನು ಬಲಪಡಿಸಿದರು.

ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ ಅಪಾರ ಪ್ರಮಾಣದ ಸೋಂಕು ಹಾಗೂ ಸಾವಿನ ರುದ್ರನರ್ತನ ನಡೆದಿರುವಾಗಲೇ ಭಾರತ ಹಾನಿಯ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ. ಮುಂಬರುವ ದಿನಗಳಲ್ಲೂ ಅಪಾಯದ ತೀವ್ರತೆಯನ್ನು ಸಾಧ್ಯವಾದಷ್ಟೂ ಹತೋಟಿಯಲ್ಲಿಡಲು ಪ್ರಧಾನಿ ಮೋದಿ ಕಂಕಣಬದ್ಧರಾಗಿ ಕಾರ್ಯೋನ್ಮುಖರಾಗಿದ್ದಾರೆ. ಸವಾಲನ್ನು ಒಗ್ಗಟ್ಟಾಗಿ ಎದುರಿಸಲು ದೇಶದ ಸಮಸ್ತ ಜನರನ್ನು ಪ್ರೇರೇಪಿಸುತ್ತಾ ಬಂದಿರುವ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಮೂಲಕ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here