ಆರೂವರೆ ಕೋಟಿ ಕನ್ನಡಿಗರ ‘ಸೇವೆ’ ಮಾಡುವ ಏಕೈಕ ಉದ್ದೇಶಕ್ಕೆ ತಿಪ್ಪರಲಾಗ ಹಾಕುತ್ತಿರುವ ನಮ್ಮ ನಾಯಕರ ‘ನಿಸ್ವಾರ್ಥ’ ರಾಜಕಾರಣದ ನಡುವೆ ನಿನ್ನೆ ನಡೆದ ಈ ಘಟನೆ ನಿದ್ದೆಗೆಡಿಸಿದೆ…ಕೇರಳದ ಪುದುಶ್ಶೇರಿಯ ದಾದಿ ಲಿನಿ, ಅಮ್ಮನಂಥವಳು… 2 ವರ್ಷ ಮತ್ತು 5 ವರ್ಷದ ಪುಟ್ಟ ಮಕ್ಕಳ ತಾಯಿ… ತಾಲೂಕು ಆಸ್ಪತ್ರೆಯಲ್ಲಿ ಕಾಂಟ್ರಾಕ್ಟ್​ ಮೇಲೆ ದಾದಿಯಾಗಿದ್ದವಳು… ಮದ್ದೇ ಇಲ್ಲದ ಮಾರಣಾಂತಿಕ ನಿಫಾ ರೋಗದ ಸೋಂಕು ತಗುಲಿದ್ದ ಮೂವರು ರೋಗಿಗಳನ್ನು ನೋಡಿಕೊಂಡಿದ್ದವಳು…

ಯಾವುದೋ ಕ್ಷಣದಲ್ಲಿ ಆ ರೋಗಿಗಳ ದೇಹದೊಳಗಿನ ರಕ್ಕಸ ವೈರಾಣು ಲಿನಿಯ ದೇಹಕ್ಕೂ ಹೊಕ್ಕಿತ್ತು… ಮತ್ತು ನಿನ್ನೆ ಬೆಳ್ಳಂಬೆಳಗ್ಗೆ ಆಸ್ಪತ್ರೆಯ ಐಸಿಯೂನಲ್ಲಿ ಲಿನಿ ಲೀನವಾದಳು…ಐಸಿಯೂನಲ್ಲಿ ಮಲಗಿದ್ದ ಲಿನಿ, ತನ್ನ ಸಾವು ಖಚಿತ ಎಂಬುದನ್ನು ತಿಳಿದು ಪಕ್ಕದಲ್ಲಿರದ ಗಂಡನಿಗೊಂದು ಪತ್ರ ಬರೆದಳು… ವೈದ್ಯರು ಬರೆಯುವ ಮದ್ದಿನ ಚೀಟಿಯಲ್ಲೇ ತನ್ನ ಪತಿಗೆ ಆ ಬದುಕಿನ ಕೊನೆಯ ಸಂದೇಶ ಹೀಗೆ ಬರೆದಿದ್ದಳು-

‘ಸಾಜಿ ಚೇಟಾ, ನಾನು ಈಗಾಗಲೇ ನನ್ನ ದಾರಿಯಲ್ಲಿದ್ದೇನೆ, ನಿಮ್ಮನ್ನು ನೋಡಲು ನನಗೆ ಸಾಧ್ಯವಾಗಬಹುದು ಎಂದು ನನಗನ್ನಿಸುತ್ತಿಲ್ಲ, ಕ್ಷಮಿಸಿ, ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ.. ಏನೂ ಅರಿಯದ ನಮ್ಮ ಮಕ್ಕಳನ್ನು ಗಲ್ಫ್​ಗೆ ಕರೆದುಕೊಂಡು ಹೋಗಿ. ನನ್ನ ತಂದೆ ನನಗೆ ಮಾಡಿದ ರೀತಿ ಅವರಿಗೆ ಮಾಡಬೇಡಿ.. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ- ಲಿನಿ’

ನಿನ್ನೆ ಬೆಳಗ್ಗೆ ಲಿನಿ ಸಾವಿಗೀಡಾಗುತ್ತಿದ್ದಂತೆ ತಕ್ಷಣ ಅವಳ ಮೃತದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ದಹಿಸಲಾಯಿತು… ಸೋಂಕು ತಗಲಬಹುದೆಂದು ತಕ್ಷಣವೇ ಅಂತ್ಯಕ್ರಿಯೆ ಮಾಡಲಾಗಿತ್ತು… ಆ ಎರಡು ಪುಟ್ಟ ಮಕ್ಕಳಿಗೆ ಅಮ್ಮನ ಬಗ್ಗೆ ಏನು ಹೇಳಿದರೋ, ಈಗ ಬರಬಹುದು, ನಾಳೆ ಬರಬಹುದು.. ಅದೇನೇನು ಕಾರಣ ಹೇಳಿ ರಮಿಸುತ್ತಿರಬಹುದೋ.. ಗೊತ್ತಿಲ್ಲ…ಮದ್ದೇ ಇಲ್ಲದ ಆ ಮಾರಣಾಂತಿಕ ಸೋಂಕು ಮಂಗಳೂರಿಗೂ ಆವರಿಸುತ್ತಿರುವ ಸುದ್ದಿ ಬರುತ್ತಿದೆ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here