ಕೊರೋನಾ ವೈರಸ್ ಹೆಮ್ಮಾರಿ ಹರಡುವಿಕೆ ತಡೆಗೆ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಗರಿಕರಿಗೆ ೧.೭ ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಎಲ್ಲ ವರ್ಗಗಳ ಕಲ್ಯಾಣಕ್ಕೆ ಮುಂದಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ವಿತ್ತ ಸಚಿವರ ನೇತೃತ್ವದಲ್ಲಿ ರಚಿಸಿದ್ದ ಕಾರ್ಯಪಡೆಗೆ ಕೊರೊನಾದಿಂದ ದೇಶದ ಆರ್ಥಿಕತೆ ಮೇಲಿನ ಪ್ರಭಾವವನ್ನು ತಗ್ಗಿಸಲು, ಸೂಕ್ತ ಕ್ರಮ ಹಾಗೂ ಆರ್ಥಿಕ ಚೇತರಿಕೆ ಪ್ಯಾಕೇಜ್‌ಗೆ ಸೂಚಿಸಿದ್ದರು. ಅದರಂತೆ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಹಾಯಕ ಸಚಿವ ಅನುರಾಗ್ ಠಾಕೂರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಯೋಜನೆಗಳ ವಿಶೇಷ ಪ್ಯಾಕೆಜ್ ಘೋಷಿಸಿದರು.
ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿಯಂತ್ರಿಸುವ ಮತ್ತು ಸೋಂಕು ಪೀಡಿತರಿಗೆ ಪರಿಹಾರ ನೀಡುವ ಸಲುವಾಗಿ ಬಹುದೊಡ್ಡ ಮೊತ್ತವನ್ನು ಮೀಸಲಿಡಲಾಗಿದೆ. ವಲಸೆ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ ೧.೭ ಲಕ್ಷ ಕೋಟಿ ರೂ ಪ್ಯಾಕೇಜ್ ಪ್ರಕಟಿಸಲಾಗಿದ್ದು, ದೇಶದ ಯಾರೊಬ್ಬರೂ ಸಹ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.
ಪ್ರಕಟಿತ ಯೋಜನೆಯಂತೆ ಮುಂದಿನ ೩ ತಿಂಗಳವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಯಲ್ಲಿರಲಿದ್ದು, ಇದರಡಿ ೮೦ ಕೋಟಿ ಬಡ ಜನರಿಗೆ ಈಗಿರುವ ಪ್ರಮಾಣದ ಜತೆಗೆ ಹೆಚ್ಚುವರಿಯಾಗಿ ೫ಕೆ.ಜಿ. ಅಕ್ಕಿ ಅಥವಾ ಗೋದಿ ಉಚಿತವಾಗಿ ಸಿಗಲಿದೆ. ಹೆಚ್ಚುವರಿಯಾಗಿ ೧ ಕೆ.ಜಿ. ಬೇಳೆಯೂ ದೊರೆಯಲಿದೆ.
ಮಹಿಳಾ ಜನ್‌ಧನ್ ಖಾತೆದಾರರಿಗೆ ಮಾಸಿಕ ೫೦೦ ರೂಪಾಯಿ ಮುಂದಿನ ೩ ತಿಂಗಳವರೆಗೂ ಲಭಿಸಲಿದೆ. ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದಿರುವ ೮ ಕೋಟಿ ಮಹಿಳೆಯರಿಗೆ ೩ ತಿಂಗಳವರೆಗೂ ೩ ಸಿಲಿಂಡರ್‌ಗಳು ಉಚಿತವಾಗಿ ಪೂರೈಕೆಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸುಮಾರು ೩ ಕೋಟಿ ಅಂಗವಿಕಲರು, ವಿಧವೆಯರು, ವೃದ್ದರ ಮಾಸಾಶನ ೩ ತಿಂಗಳ ಕಾಲ ಹೆಚ್ಚುವರಿಯಾಗಿ ೧ ಸಾವಿರ ರೂ ಏರಿಕೆಯಾಗಲಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ೮.೬ ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರವೇ ೨೦೦೦ ರೂ, ನೇರ ನಗದು ವರ್ಗಾವಣೆ ಅಡಿಯಲ್ಲಿ ಹಣ ಸಿಗಲಿದೆ. ನಂತರದಲ್ಲಿ ಉಳಿದ ೪ ಸಾವಿರ ದೊರೆಯಲಿದೆ.
ಕೊರೊನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ವಿಮಾನನಿಲ್ದಾಣ ಸಿಬ್ಬಂದಿಗೆ ೩ ತಿಂಗಳ ಕಾಲ ೫೦ ಲಕ್ಷ ವೈದ್ಯಕೀಯ ವಿಮೆ ಪ್ರಕಟಿಸಲಾಗಿದೆ.
ಗ್ರಾಮೀಣ ಉದ್ಯೋಗ ಖಾತ್ರಿಯ ನರೇಗಾ ಯೋಜನೆಯಡಿ ವೇತನ ದಿನವೊಂದಕ್ಕೆ ನಿಗದಿಯಾಗಿದ್ದ ೧೮೨ ರೂ.ಗಳಿಂದ ೨೦೨ ರೂ.ಗಳಿಗೆ ಏರಿಕೆಯಾಗಿದ್ದು ೫ ಕೋಟಿ ಕುಟುಂಬಗಳು ಇದರ ಫಲಾನುಭವಿಗಳಾಗಲಿದ್ದಾರೆ.
೧೦೦ ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ಶೇ ೯೦ರಷ್ಟು ಮಂದಿ ತಿಂಗಳಿಗೆ ೧೫,೦೦೦ ರೂವರೆಗೂ ವೇತನ ಪಡೆಯುತ್ತಿದ್ದರೆ, ಅಂತಹ ಉದ್ಯೋಗಿಗಳ ನೌಕರ-ಸರ್ಕಾರ ಎರಡೂ ಕಡೆಯ ಇಪಿಎಫ್ ಮೊತ್ತವನ್ನು ೩ ತಿಂಗಳ ಕಾಲ ಸರ್ಕಾರವೇ ಭರಿಸಲಿದೆ. ಕಾನೂನು ತಿದ್ದುಪಡಿ ಮುಖೇನ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ ೭೫ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗಿದೆ.
ಕಾರ್ಮಿಕರು ೩ ತಿಂಗಳ ವೇತನ ಅಥವಾ ಶೇ ೭೫ರಷ್ಟು ಮುಂಗಡ ಮೊತ್ತ ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು ೪.೮ ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವಧ್ವಯರು ಮಾಹಿತಿ ಒದಗಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here