ಮೂರು ದಿನಗಳಿಂದಲೂ ಕೇಂದ್ರ ಘೋಷಣೆ ಮಾಡಿರುವ 20 ಲಕ್ಷ ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ನ ಬಗ್ಗೆ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಎಂಬುದನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯನ್ನು ನಡೆಸುವ ಮೂಲಕ ವಿವರಿಸುತ್ತಿದ್ದಾರೆ. ಇಂದು ಅವರ ವಿವರಣೆಯ ಮುಖ್ಯಾಂಶಗಳು ಈ ರೀತಿ ಇದೆ.
ಕೃಷಿ ಮೂಲ ಸೌಲಭ್ಯ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ‌. ಇದರಲ್ಲಿ ಶೀತಲ ಸಂಗ್ರಹಣೆ, ಫಸಲು ಕಟಾವಿನ ನಂತರ ಅದರ ಸಾಗಣಿಕೆಗೆ ನೆರವು, ರಫ್ತು ಮಾಡುವುದಕ್ಕೆ ಇನ್ನಿತರೆ ಉಪಯೋಗಗಳಿಗಾಗಿ ಈ 1 ಲಕ್ಷ ಕೋಟಿ ರೂ ಫಂಡ್​ನ್ನು ಕೇಂದ್ರ ಘೋಷಿಸಿದೆ.

ಆಹಾರ ಉದ್ದಿಮೆಗಳಿಗೆ ನೆರವು ನೀಡುವ ಸಲುವಾಗಿ
ಅತಿ ಚಿಕ್ಕ ಆಹಾರ ಉತ್ಪಾದನಾ ಉದ್ಯಮ (ಮೈಕ್ರೋ ಫುಡ್​ ಎಂಟರ್​ಪ್ರೈಸಸ್​​) ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂಪಾಯಿ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ಸುಮಾರು 2 ಲಕ್ಷ ಉದ್ಯಮಗಳಿಗೆ ನೆರವು ದೊರೆಯಲಿದ್ದು, ಈ ಯೋಜನೆಯ ಸಹಾಯದಿಂದ ಕರ್ನಾಟಕ ರಾಗಿ ಕ್ಲಸ್ಟರ್​ ಮಾಡಲು, ಈಶಾನ್ಯ ರಾಜ್ಯಗಳು ಬಿದಿರು ಕ್ಲಸ್ಟರ್​ ಮಾಡಬಹುದು, ಕಾಶ್ಮೀರದಲ್ಲಿ ಕೇಸರಿ ಹೀಗೆ ಆಯಾ ರಾಜ್ಯಗಳಲ್ಲಿ ಅವರದೇ ಆದ ವಿವಿಧ ಕ್ಲಸ್ಟರ್​ಗಳನ್ನು ಮಾಡಲು ಅವಕಾಶವಿದೆ. ಅಲ್ಲದೆ ಮಹಿಳಾ ಸಬಲೀಕರಣಕ್ಕೆ ಕೂಡಾ ಪ್ರಾಧಾನ್ಯತೆಯನ್ನು ನೀಡಲಾಗಿದೆ.

ಮತ್ಸ್ಯ ಸಂಪದ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲು ನಿರ್ಧಾರವನ್ನು ಮಾಡಲಾಗಿದೆ. ಇದಕ್ಕಾಗಿ 20 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಮೀನುಗಾರಿಕೆ ಉದ್ಯಮವು ಭಾರತದಲ್ಲಿ 50 ಲಕ್ಷ ಜನರಿಗೆ ಉದ್ಯೋಗ ಒದಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಇದರ ಜೊತೆಗೆ ಮೀನುಗಾರರು ಮತ್ತು ಮೀನು ಹಿಡಿಯಲು ಬಳಸುವ ಹಡಗುಗಳಿಗೆ ವಿಮೆಯ ಸೌಲಭ್ಯವನ್ನು ಒದಗಿಸಲಾಗುತ್ತದೆ.

ರೈತರ ಜೀವನದ ಅಥವಾ ಕೃಷಿಯ ಅವುಭಾಜ್ಯ ಅಂಗವಾಗಿರುವ ಜಾನುವಾರುಗಳ ರಕ್ಷಣೆಗೆ ಕೂಡಾ ಆದ್ಯತೆಯನ್ನು ನೀಡಿದ್ದು, ಸುಮಾರು 13,300 ಕೋಟಿ ರೂಗಳನ್ನು ನೀಡಲಾಗಿದೆ. ಕಾಲು-ಬಾಯಿ ರೋಗ ನಿಯಂತ್ರಣಕ್ಕಾಗಿ ಎಲ್ಲ ಜಾನುವಾರುಗಳಿಗೆ ಲಸಿಕೆ ಸೌಲಭ್ಯವನ್ನು ಒದಗಿಸಲಾಗಿದ್ದು, ದನ, ಎಮ್ಮೆ, ಕುರಿ, ಮೇಕೆ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕಲು ತೀರ್ಮಾನವನ್ನು ಮಾಡಲಾಗಿದೆ. ಈ ಸೌಲಭ್ಯದಿಂದ 53 ಕೋಟಿ ಜಾನುವಾರಗಳ ಆರೋಗ್ಯ ವೃದ್ಧಿ, ಅವುಗಳ ಸಾಕಾಣಿಕೆದಾರರಿಗೂ ಅನುಕೂಲವಾಗಲಿದೆ. ಪಶುಸಂಗೋಪನೆ ಅಭಿವೃದ್ಧಿಗಾಗಿ ಕೂಡಾ ಯೋಜನೆ ರೂಪಿಸಿದ್ದು,ಇದಕ್ಕಾಗಿ 15 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಹರ್ಬಲ್ ಕೃಷಿಗಾಗಿ 4 ಸಾವಿರ ಕೋಟಿ ರೂಪಾಯಿ ನೀಡಲಾಗಿದ್ದು, ಇದನ್ನು ಮಾಡುವ ರೈತರಿಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ಆದಾಯ ತರುವ ಗುರಿಯನ್ನು ಹೊಂದಿದ್ದು, ವೈದ್ಯಕೀಯ ಗಿಡಗಳನ್ನು ಬೆಳೆಯುವುದಕ್ಕಾಗಿ ಗಂಗಾ ನದಿಯ ದಂಡೆಯಲ್ಲಿ ಸುಮಾರು 800 ಹೆಕ್ಟೇರ್ ಪ್ರದೇಶವನ್ನು ಈ ಬೋರ್ಡ್ ತನ್ನ ಅಧೀನಕ್ಕೆ ಪಡೆದುಕೊಂಡು ಅಭಿವೃದ್ಧಿ ಪಡಿಸಲಿದೆ. ಜೇನು ಸಾಕಾಣಿಕಾ ವಲಯಕ್ಕೆ ಕೂಡಾ ಆರ್ಥಿಕ ಸಹಾಯವನ್ನು ಅಂದರೆ ಈ ವಲಯಕ್ಕೆ 500 ಕೋಟಿ ರೂಪಾಯಿ ನೀಡಲು ನಿರ್ಧರಿಸಲಾಗಿದೆ.
ಇದು 2 ಲಕ್ಷ ಜೇನು ಸಾಕಾಣಿಕೆದಾರರ ಪಾಲಿಗೆ ವರವಾಗಲಿದೆ.

ಟಾಪ್​ ಟು ಬಾಟಮ್ ಯೋಜನೆಯ ಅಡಿಯಲ್ಲಿ
ಆಪರೇಷನ್ ಹಸಿರಿನಡಿಯಲ್ಲಿ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಮುಂತಾದ ತರಕಾರಿ, ಹಣ್ಣುಗಳ ಸಾಗಣಿಕೆ 500 ಕೋಟಿ ರೂಪಾಯಿ ಯೋಜನೆ ಇದ್ದು,
ಇವುಗಳ ಸಾಗಣಿಕೆಗಾಗಿ ಶೇ.50 ಸಬ್ಸಿಡಿ, ಕೋಲ್ಡ್​ ಸ್ಟೋರೇಜ್​ ಮಾಡುವುದಕ್ಕೂ ಶೇ.50 ರಷ್ಟು ಸಬ್ಸಿಡಿ ನೀಡಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು, ಎಣ್ಣೆ ಕಾಳು, ಬೇಳೆ ಕಾಳು, ಈರುಳ್ಳಿ, ಆಲೂಗಡ್ಡೆ ಸಂಗ್ರಹದ ಮೇಲೆ ನಿಯಂತ್ರಣವಿಲ್ಲ ರೈತರಿಗೆ ಉತ್ತಮ ಬೆಂಬಲ ಬೆಲೆ ನೀಡಲು ಸ್ಟಾಕ್​ ಲಿಮಿಟ್​​ ತೆಗೆಯಲು ನಿರ್ಧಾರ

ರೈತರಿಗೆ ತಮ್ಮ ಬೆಳೆಯನ್ನು ಉತ್ತಮ ಬೆಲೆಗೆ ಮಾರಲು ಅವಕಾಶ ಕಲ್ಪಿಸಲಾಗುವುದು. ಬೇರೆ ಯಾವುದೇ ಕ್ಷೇತ್ರದಲ್ಲೂ ಉತ್ಪಾದಕರಿಗೆ ತಮ್ಮ ಉತ್ಪಾದನೆಯನ್ನು ಮಾರಲು ನಿಯಂತ್ರಣವಿಲ್ಲ, ಆದರೆ ರೈತರಿಗೆ ಮಾತ್ರ ಅಂಥ ನಿರ್ಬಂಧವಿತ್ತು,ಆದರೆ ಇನ್ಮುಂದೆ ರೈತರಿಗೂ ಈ ನಿರ್ಬಂಧವಿರುವುದಿಲ್ಲ. ಆಹಾರ ಸಂಸ್ಕರಣೆ ಮಾಡುವವರೊಂದಿಗೆ, ದೊಡ್ಡ ರಿಟೇಲರ್ಸ್​ಗಳೊಂದಿಗೆ ನೇರ ಸಂಪರ್ಕ ಹೊಂದಲು ಮತ್ತು ತಮಗೆ ಬೇಕಾದ ಬೆಲೆಗೆ ಮಾರಾಟ ಮಾಡಲು ಅವಕಾಶ ನೀಡಲು ಕಾನೂನು ತಿದ್ದುಪಡಿ ಮಾಡಲಾಗುವುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here