ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಪ್ರಗತಿಗಾಗಿ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ಮೊದಲನೇ ವಿವರಣೆಯನ್ನು ನೀಡಿದ್ದರು. ಇಂದು ಅವರು ಎರಡನೇ ಸುದ್ದಿಗೋಷ್ಠಿಯನ್ನು ನಡೆಸಿದ್ದು, ಇಂದು ಅವರು ತಿಳಿಸಿರುವ ವಿಷಯಗಳ ಮುಖ್ಯಾಂಶಗಳು ಈ ರೀತಿ ಇವೆ. ರೈತರ ಕಡೆ ಗಮನ ನೀಡಿರುವ ಸರ್ಕಾರವು ಅವರ ಸುರಕ್ಷತೆಗೆಗಾಗಿ 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್​​​​ ನೀಡುವುದಾಗಿ ಘೊಷಣೆ ಮಾಡಿದೆ.

3ಕೋಟಿ ರೈತರಿಗೆ ಅವರ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ ಕಡಿಮೆ ಬಡ್ಡಿ ದರದಲ್ಲಿ 4 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ನೀಡಿದ ಸಾಲದ ಇಎಂಐ ಕಟ್ಟಲು ಮೂರು ತಿಂಗಳ ಅವಧಿಯನ್ನು ವಿಸ್ತರಣೆ ಮಾಡಲಾಗುವುದು. 29,500 ಕೋಟಿ ರೂಪಾಯಿ ಸಾಲವನ್ನು ನಬಾರ್ಡ್ ಮೂಲಕ ವಿತರಿಸಲಾಗುತ್ತದೆ. ರೈತರ ಬೆಳೆಯನ್ನು ಖರೀದಿ ಮಾಡಲು ರಾಜ್ಯಗಳಿಗೆ 6700 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.

ಲಾಕ್​ ಡೌನ್ ಇದ್ದರೂ ಮಾರ್ಚ್ 1 ರಿಂದ 31ರ ವರೆಗೆ ರೈತರಿಗೆ ಸಾಲವನ್ನು ನೀಡಲಾಗಿದ್ದು, ಇದಲ್ಲದೆ ಗ್ರಾಮೀಣಾಭಿವೃದ್ಧಿಗೆ 4200 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ವಲಸೆ ಕಾರ್ಮಿಕರ ಊಟ, ವಸತಿಗಾಗಿ 11 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಎಸ್​​ಡಿಆರ್​ಎಫ್​ನಿಧಿಗೆ ಜಮಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ ಎಸ್​ಡಿಆರ್​ಎಫ್​​​​​ ನಿಧಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದ್ದು, 7200 ಸ್ವಯಂಸೇವಾ ಸಂಘಗಳು ಆರಂಭವಾಗಿವೆ. ಇವುಗಳ ಮೂಲಕ ನಗರ ಪ್ರದೇಶಗಳಲ್ಲಿ ವಾಸವಿರುವ ಬಡವರಿಗೆ ಸಹಾಯ ನೀಡಲು ನರೇಗಾದಡಿ ಕನಿಷ್ಠ ವೇತನ 182 ರೂಪಾಯಿಯಿಂದ 202 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ತಮ್ಮ ಪ್ರದೇಶಗಳಿಗೆ ಹಿಂತಿರುಗಿ ಹೋಗಿರುವ ವಲಸೆ ಕಾರ್ಮಿಕರಿಗೆ ನರೇಗಾ ಮೂಲಕ ಕೆಲಸವನ್ನು ನೀಡಲು ಸೂಚನೆಗಳನ್ನು ನೀಡಲಾಗಿದೆ. ಕನಿಷ್ಠ ವೇತನ ಹಕ್ಕು ನೀಡಲು ನಿರ್ಧಾರ ಮಾಡಲಾಗಿದೆ. (ಯೂನಿವರ್ಸಲ್​​ ಮಿನಿಮಮ್ ವೇಜಸ್, ರೈಟ್​ ಟು ಮಿನಿಮಮ್ ವೇಜ್) ಕನಿಷ್ಠ 10 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಇಎಸ್​ಐ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಯಲ್ಲೇ ಸ್ವಯಂ ಪ್ರೇರಿತರಾಗಿ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೂ ಕೂಡಾ ಈ ಸೌಲಭ್ಯವನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ.

ನೌಕರರ ಗ್ರಾಜ್ಯುಟಿ ಅವಧಿ 5 ರಿಂದ 1 ವರ್ಷಕ್ಕೆ ಇಳಿಕೆ
ಮಾಡಲಾಗಿದ್ದು, ಅರೆಕಾಲಿಕ ನೌಕರರಿಗೆ ವಿಶೇಷ ಸಾಮಾಜಿಕ ಭದ್ರತಾ ಯೋಜನೆಯನ್ನು ರೂಪಿಸಲಾಗಿದೆ. ಪಡಿತರ ಚೀಟಿ ಇಲ್ಲದೇ ಇರುವ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ರೇಷನ್ ನೀಡಲು ನಿರ್ಧಾರ ಮಾಡಲಾಗಿದ್ದು, ಇದಕ್ಕಾಗಿ ಮುಂದಿನ 2 ತಿಂಗಳ ಅವಧಿಗೆ 3500 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.

ನ್ಯಾಶನಲ್​​ ಪೋರ್ಟೆಬಲ್​ ರೇಷನ್ ಕಾರ್ಡ್​: ರೇಷನ್​ ಕಾರ್ಡ್​ಗಳನ್ನು ದೇಶದ ಎಲ್ಲ ರಾಜ್ಯಗಳಲ್ಲೂ ಬಳಸಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಮುಂದೆ ಒಂದು ದೇಶ, ಒಂದು ಪಡಿತರ ಯೋಜನೆ ಜಾರಿಯಾಗಲಿದೆ. ಮಾರ್ಚ್​​ 2021 ಒಳಗೆ ನ್ಯಾಶನಲ್​ ಪೋರ್ಟೆಬಿಲಿಟಿ ಮುಗಿಸುವ ಅವಕಾಶ ​​​
23 ರಾಜ್ಯಗಳ 67 ಕೋಟಿ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒನ್​ ನೇಷನ್, ಒನ್​ ರೇಷನ್ ಕಾರ್ಡ್​ ವಿತರಣೆ ಮಾಡಲಾಗುವುದು.

ನಗರದ ಬಡವರಿಗೆ ಹಾಗೂ ವಲಸೆ ಕಾರ್ಮಿಕರಿಗಾಗಿ ರೆಂಟಲ್​ ಹೌಸಿಂಗ್​ ಕಾಂಪ್ಲೆಕ್ಸ್​ ನಿರ್ಮಾಣ ಮಾಡುವುದು. ಅತಿ ಚಿಕ್ಕ ಸಾಲಗಾರರಿಗೂ ಸಹಾಯ ನೀಡಲು ನಿರ್ಧಾರ ಮಾಡಲಾಗಿದೆ. ಮುದ್ರಾ ಶಿಶು ಲೋನ್​​ (ಗರಿಷ್ಠ 50 ಸಾವಿರ ಸಾಲ ಪಡೆದವರು) ಪಡೆದವರು ಮೂರು ತಿಂಗಳ ನಂತರ ಇಎಂಐ ಕಟ್ಟಿದರೆ ಅವರಿಗೆ ತಮ್ಮ ಇಎಂಐ ಮೇಲೆ ಶೇ.2ರಷ್ಟು ಇನ್ಸೆಂಟಿವ್ಸ್​ ನೀಡಲು ನಿರ್ಧಾರ ಮಾಡಲಾಗಿದೆ.‌
ಇದರಿಂದಾಗಿ ಕನಿಷ್ಠ 3 ಕೋಟಿ ಮುದ್ರಾ ಶಿಶು ಲೋನ್​​​ ಗ್ರಾಹಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

ಸುಮಾರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗಾಗಿ 5 ಸಾವಿರ ಕೋಟಿ ರೂಪಾಯಿ ಸುಲಭ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.‌ ಇದರ ಆರಂಭಿಕ ಹಂತದಲ್ಲಿ 10 ಸಾವಿರ ರೂಪಾಯಿ ಸಾಲ ನೀಡಲಾಗುವುದು. ಮನೆಕೆಲಸದವರಿಗಾಗಿ, ರೈಲಿನಲ್ಲಿ ವಸ್ತು ಮಾರಾಟ ಮಾಡುವಂಥವರಿಗಾಗಿ, ಚಿಕ್ಕ ಚಿಕ್ಕ ಅಂಗಡಿ ಮುಂಗಟ್ಟು ಇಟ್ಟುಕೊಂಡವರಿಗೆ ಈ ಸೌಲಭ್ಯ ಅನುಕೂಲ ಕಲ್ಪಿಸಲಿದ್ದು, ಒಂದು ತಿಂಗಳ ಒಳಗೆ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎನ್ನಲಾಗಿದೆ.

ಡಿಜಿಟಲ್​ ಪೇಮೆಂಟ್ ಮಾಡುವವರಿಗೆ ವಿಶೇಷ ಇನ್ಸೆಂಟಿವ್ಸ್​ ನೀಡಲು ನಿರ್ಧಾರ ಮಾಡಲಾಗಿದೆ. ಇದಲ್ಲದೆ ಮಧ್ಯಮವರ್ಗದವರಿಗೆ, ಅದರಲ್ಲೂ ವಾರ್ಷಿಕ 6 ರಿಂದ 18 ಲಕ್ಷ ವಾರ್ಷಿಕ ಸಂಬಳ ಪಡೆಯುವ ಉದ್ಯೋಗಿಗಳಿಗೂ ವಿಶೇಷ ಯೋಜನೆ ರೂಪಿಸಲಾಗುವುದು. ಇದಕ್ಕಾಗಿ 70 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಸ್ವಂತ ಮನೆ ಕಟ್ಟುವ ಕನಸು ಇರುವವರಿಗೆ ಈ ಸಾಲ ಸೌಲಭ್ಯ ನೀಡಲಾಗಿದೆ. ಮಾರ್ಚ್​​ 2021 ವರೆಗೆ ಈ ಸೌಲಭ್ಯ ದೊರೆಯಲಿದೆ.

ಇದರಿಂದ ರಿಯಲ್​ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ಬಲ ಬರುವುದು ಹಾಗೂ ಸಿಮೆಂಟ್, ಸ್ಟೀಲ್​ ಮುಂತಾದವುಗಳಿಗೆ ಬೇಡಿಕೆ ಹೆಚ್ಚುತ್ತದೆ. ನಬಾರ್ಡ್​ ಮೂಲಕ ರೈತರ ತುರ್ತು ಅನುಕೂಲಕ್ಕಾಗಿ 30 ಸಾವಿರ ಕೊಟಿ ರೂಪಾಯಿ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುವುದು. ಇದರಿಂದ 3 ಕೋಟಿ ರೈತರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ‌ ​​

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here