ಪ್ರಧಾ‌ನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದ 20 ಲಕ್ಷ ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಕಳೆದ ನಾಲ್ಕು ದಿನಗಳಿಂದ ವಿವರಿಸಿದ್ದು, ಇಂದಿಗೆ ಅದು ಮುಗಿದಿದೆ. ಇಂದು ಅವರು ಪ್ರಸ್ತಾಪಿಸಿದ ಪ್ರಮುಖ ವಿಚಾರಗಳು ಈ ರೀತಿ ಇವೆ‌. ನರೇಗಾ ಸೇರಿದಂತೆ 7 ಯೋಜನೆಗಳನ್ನು ಘೋಷಣೆ ಮಾಡಿದ್ದು,ಆರೋಗ್ಯ,ಶಿಕ್ಷಣ, ಉದ್ಯೋಗ, ಗ್ರಾಮೀಣಾಭಿವೃದ್ಧಿ, ನರೇಗಾ, ನಗರಾಭಿವೃದ್ಧಿ ಹಾಗೂ ರಾಜ್ಯ ಸರ್ಕಾರದ ಸಂಪನ್ಮೂಲಗಳಿಗೆ ವಿಶೇಷ ಹಣಕಾಸಿನ ನೆರವು ಘೋಷಿಸುವುದಾಗಿ ತಿಳಿದಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ರಾಜ್ಯಗಳಿಗೆ 4113 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಟೆಲಿ ಮೆಡಿಸಿನ್​-ಇ-ಸಂಜೀವಿನಿ ಜಾರಿಗೆ ವಿಶೇಷ ಅನುದಾನ ನೀಡಲಾಗುವುದೆಂದು ತಿಳಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ದುಡಿಯುತ್ತಿರುವ ವಾರಿಯರ್ಸ್​ಗೆ 50 ಲಕ್ಷ ರೂ.ವಿಮೆ ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಪರೀಕ್ಷಾ ಲ್ಯಾಬ್​ ಮತ್ತು ಕಿಟ್​ಗಳಿಗೆ 550 ಕೋಟಿ ರೂ.ನೀಡಲಾಗಿದೆ.

ದೇಶದಲ್ಲಿ ಇನ್ನು ಮುಂದೆ ಇ-ಪಾಠಾಶಾಲೆಯನ್ನು ಆರಂಭಿಸಲಾಗುವುದು. ಆನ್​ಲೈನ್​ ಶಿಕ್ಷಣವನ್ನು ದೊಡ್ಡಮಟ್ಟದಲ್ಲಿ ನಡೆಸಲಾಗುವುದು. ಇ-ಪಾಠಾಶಾಲೆ ಮೂಲಕ ತಜ್ಞರಿಂದ ಪಾಠ ಪ್ರವಚನ ನೀಡಲಾಗುವುದು. ಆನ್​ಲೈನ್​ ಶಿಕ್ಷಣಕ್ಕಾಗಿಯೇ ಹೊಸದಾಗಿ 3 ಪ್ರತ್ಯೇಕ ಚಾನಲ್​ ಈಗಾಗಲೇ ಕಾರ್ಯಾರಂಭ ಮಾಡಿವೆ. ಡಿಟಿಎಚ್​, ಏರ್ಟೆಲ್​ ಹಾಗೂ ಟಾಟಾ ಸ್ಕೈ ಮೂಲಕ ಆನ್​ಲೈನ್ ಶಿಕ್ಷಣ ನಡೆಯುವುದು. ಪ್ರತಿ 4 ಗಂಟೆ ಶಿಕ್ಷಣ ದೊರಕಲಿದೆ. ಸ್ಕೈಪ್​ ಮೂಲಕವು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಮನ್ರೇಗಾಗೆ ಬಜೆಟ್​ನಲ್ಲಿ 61 ಸಾವಿರ ಕೋಟಿ ರೂ. ಇಡಲಾಗಿತ್ತು ಈಗ ಅದಕ್ಕೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ.ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಪ್ರಾಶಸ್ತ್ಯ ನೀಡಲಾಗುವುದು. ಆರೋಗ್ಯ ಸುಧಾರಣೆಗೆ ಹೆಚ್ಚುವರಿ ಹಣ ನೀಡಲಾಗುವುದು. ಪ್ರತಿ ಜಿಲ್ಲೆಗಳಲ್ಲಿ ಹೆಲ್ತ್​ ಆ್ಯಂಡ್​ ವೆಲ್​ನೆಸ್​ ಕೇಂದ್ರದ ಜತೆಗೆ ಸಾಂಕ್ರಾಮಿಕ ನಿರೋಧಕ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ರೋಗಗಳಿಗೆ ಸಂಬಧಿಸಿದ ಹಾಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲ್ಯಾಬ್​ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.

ಕೊರೊನಾದಿಂದ ಬಹುತೇಕ ವಲಯಗಳು ಸಮಸ್ಯೆಯ ಸುಳಿಗೆ ಸಿಲುಕಿದ್ದು , ಬ್ಯಾಂಕಿಂಗ್​ ವಲಯ ಕೂಡ ಇದಕ್ಕೆ ಹೊರತಾಗಿಲ್ಲ, ಆದ್ದರಿಂದ ಬ್ಯಾಂಕಿಂಗ್​ ಸಂಹಿತೆ ಜಾರಿ ಮಾಡಲಾಗುವುದು. ಐಬಿಸಿ ನಿಯಮದಲ್ಲಿ ಮಹತ್ವರ ಬದಲಾವಣೆ ಮಾಡಲಾಗಿದ್ದು, ಸಾಲ ಮರುಪಾವತಿಯಲ್ಲಿ ಕೆಲವು ಬದಲಾವಣೆ ಮಾಡಲಾಗುವುದು. ಸಾಲ ಮರುಪಾವತಿ ಮಾಡದಿದ್ದರೆ, ಸುಸ್ತಿದಾರ ಎಂದು ಪರಿಗಣಿಸುವುದಿಲ್ಲ ಎನ್ನಲಾಗಿದೆ. ಎಂಎಸ್​ಎಂಇಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು, ದಿವಾಳಿ ಎಂದು ಘೋಷಿಸಿಕೊಳ್ಳಲು ಒಂದು ವರ್ಷ ಅವಧಿ ನೀಡಲಾಗುವುದು.

ಕಂಪನಿ ಕಾನೂನುಗಳಲ್ಲಿಯೂ ಕೆಲವು ಬದಲಾವಣೆ ಮಾಡಲಾಗುವುದು. ಕಂಪನಿ ಆಧಾರಿತ ಅಪರಾಧಗಳು ಕಾನೂನು ಬಾಹಿರವಲ್ಲ. 5 ರೀತಿಯ ಅಪರಾಧ ವಿಚಾರಣೆಗಳಲ್ಲಿ ಬದಲಾವಣೆಗಳನ್ನು ತರಲಾಗುವುದು. ಇದಕ್ಕಾಗಿ ಆಂತರಿಕ ವಿಚಾರಣಾ ಸಮಿತಿ ರಚನೆ ಮಾಡಲಾಗುವುದು.

ರಾಜ್ಯಗಳ ಆದಾಯ ಸಂಗ್ರಹದಲ್ಲೂ ಭಾರಿ ಕುಸಿತವಾಗಿದೆ‌. ಆದರೆ ರಾಜ್ಯಗಳು ಕೋವಿಡ್​ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿವೆ. ತೆರಿಗೆ, ಬಜೆಟ್​ ಎಂದಿನಂತೆಯೇ ಇರಲಿದೆ. ರಾಜ್ಯ ಸರ್ಕಾರಗಳಿಗೆ ಈವರೆಗೆ 46,038 ಕೋಟಿ ರೂ. ಅನ್ನು ತೆರಿಗೆ ನಷ್ಟ ಪರಿಹಾರ ರೂಪದಲ್ಲಿ ನೀಡಲಾಗಿದ್ದು, ಏಪ್ರಿಲ್​, ಮೇ ನಲ್ಲಿ 12, 390 ಕೋಟಿ ರೂಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಏಪ್ರಿಲ್​ ಮೊದಲ ವಾರದಲ್ಲಿ 11,092 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಶೇ. 60ಕ್ಕೆ ಹೆಚ್ಚಳ ಮಾಡಲಾಗಿದೆ. ರಾಜ್ಯಗಳ ಓವರ್​ ಡ್ರಾಫ್ಟ್​ 21 ದಿನಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here