ಬೆಂಗಳೂರು : ನಟ, ನಿರೂಪಕ ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರಿನಲ್ಲಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಆರೋಪಿ ನಿಶಾ ನರಸಪ್ಪ ಮಾಡಿರುವ ಮೋಸ ಬಗೆದಷ್ಟು ಬಯಲಾಗುತ್ತಿದೆ.
ವಂಚನೆ ಹಿನ್ನೆಲೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ನಿಶಾ ಕೇವಲ ವನ್ಷಿಕಾ ಹೆಸರಷ್ಟೇ ಅಲ್ಲದೇ, ಸೆಲೆಬ್ರೆಟಿಗಳ ಹೆಸರಿನಲ್ಲಿ ಕೂಡ ದೋಖಾ ಎಸಗಿರುವುದು ಬಯಲಾಗಿದೆ. ಇನ್ಸ್ಟಾಗ್ರಾಮ್ನನ್ನು ಹೆಚ್ಚಾಗಿ ಬಳಕೆ ಮಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ನಿಶಾ ಅವರಿಗೆ ವಂಚನೆ ಎಸಗುತ್ತಿದ್ದಳು. ತುಂಬಾ ಸುಂದರವಾದ ತಾಯಿ-ಮಗಳ ಫೋಟೋ ಕಂಡ ಕೂಡಲೇ ಅವರನ್ನು ನಿಶಾ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಅವರ ಬಳಿ ಚಾಟ್ ಮಾಡಿ ಸಲುಗೆ ಬೆಳೆಸಿ ನಂತರ ಫೋಟೋಶೂಟ್ ಇದೆ ಬನ್ನಿ ಎಂದು ಕರೆಸಿ ಹಣ ಪಡೆದು ಮೋಸ ಮಾಡುತ್ತಿದ್ದಳು. ಒಂದು ಮಗುವಿನ ಆ್ಯಡ್ ಶೂಟ್ ಗೆ ಈಕೆ 10 ಸಾವಿರ ಪಡೆಯುತ್ತಿದ್ದಳು ಎನ್ನಲಾಗಿದೆ.
ನಿಶಾ ನರಸಪ್ಪ ಎಂಬ ಖತರ್ನಾಲ್ ಲೇಡಿ ಮಕ್ಕಳ ಪೋಷಕರಿಂದ ಲಕ್ಷ ಲಕ್ಷ ರೂ.ಗಳನ್ನು ಪಡೆದುಕೊಂಡು ವಂಚನೆ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.ಸದಾಶಿವನಗರದ ಠಾಣೆಯಲ್ಲಿ 35 ಲಕ್ಷ ರೂ. ಯಲಹಂಕ ಠಾಣೆಯಲ್ಲಿ 20 ಲಕ್ಷ ರೂ. ವಂಚನೆ ಮಾಡಿರುವ ದೂರು ದಾಖಲಾಗಿದೆ. ತಾರಾ ಎಂಬುವರಿಗೆ 20 ಲಕ್ಷ ರೂ. ವಂಚನೆ ಮಾಡಲಾಗಿದೆ.
ಮಕ್ಕಳ ಟ್ಯಾಲೆಂಟ್ ಶೋನಲ್ಲಿ ನಿಮ್ಮ ಮಕ್ಕಳಿಗೂ ಅವಕಾಶ ಕೊಡಿಸುವುದಾಗಿ ಹೇಳಿ ನೂರಾರು ಮಂದಿ ಪೋಷಕರಿಂದ ಲಕ್ಷಾಂತರ ರೂ. ವಂಚನೆ ಎಸಗಲಾಗಿದೆ. ಪ್ರಕರಣ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿಶಾಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.